Home Latest ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಪರಿಚಯಿಸಿದ ಉಡುಪಿ ಪೊಲೀಸರು : ಎಸ್‌ಪಿ ಹರಿರಾಮ್ ಶಂಕರ್ ಮಾಹಿತಿ..!

ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಪರಿಚಯಿಸಿದ ಉಡುಪಿ ಪೊಲೀಸರು : ಎಸ್‌ಪಿ ಹರಿರಾಮ್ ಶಂಕರ್ ಮಾಹಿತಿ..!

ಎರಡು-ಮೂರು ದಿನಗಳಿಗಿಂತ ಹೆಚ್ಚು ಕಾಲ ಮನೆಗೆ ಬೀಗ ಹಾಕಿ ಹೊರಗಡೆ ಹೋಗುತ್ತಿದ್ದೀರಾ..?ಹಾಗಿದ್ದರೆ ನಿಮ್ಮ ಮನೆ ಸುರಕ್ಷತೆಯ ಹೊಣೆ ಈಗ ಉಡುಪಿ ಪೊಲೀಸರದು..!

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರ ಮನೆಗಳ ಭದ್ರತೆಗೆ “ಲಾಕ್ಡ್ ಹೌಸ್ ಬೀಟ್ ಸಿಸ್ಟಮ್” (LHBS) ಎಂಬ ವಿನೂತನ ಯೋಜನೆಯನ್ನು ಆರಂಭಿಸಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ಈ ಯೋಜನೆಯಡಿ, ಕೆಲಸ, ಪ್ರವಾಸ ಅಥವಾ ಇತರ ಕಾರಣಗಳಿಂದ ಎರಡು-ಮೂರು ದಿನಗಳಿಗಿಂತ ಹೆಚ್ಚು ಕಾಲ ಮನೆಗೆ ಬೀಗ ಹಾಕಿ ಹೋಗುವವರು ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಮುಂಚಿತವಾಗಿ ಮಾಹಿತಿ ನೀಡಬಹುದು. ಬಳಿಕ ಸಂಬಂಧಪಟ್ಟ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಮನೆಗೆ ಹಗಲು ಹಾಗೂ ರಾತ್ರಿ ವಿಶೇಷ ನಿಗಾ ವಹಿಸಲಿದ್ದಾರೆ.

 

ಮನೆ ಮಾಲೀಕರು ತಮ್ಮ ಪ್ರಯಾಣದ ದಿನಾಂಕ, ವಾಪಸ್ಸು ಬರುವ ದಿನ, ಸಂಪೂರ್ಣ ವಿಳಾಸ ಹಾಗೂ ಮನೆಯ ಮುಂದೆ ತೆಗೆದ ಸೆಲ್ಫಿ ಫೋಟೋವನ್ನು ಕಳುಹಿಸಬೇಕು. ಮಾಹಿತಿ ಪಡೆದ ನಂತರ ಜಿಲ್ಲಾ ಕಂಟ್ರೋಲ್ ರೂಂ ಅದನ್ನು ಸಂಬಂಧಪಟ್ಟ ಠಾಣೆಗೆ ರವಾನಿಸಿ, ಬೀಟ್ ಸಿಬ್ಬಂದಿಯನ್ನು ಭದ್ರತಾ ಮೇಲ್ವಿಚಾರಣೆಗೆ ನಿಯೋಜಿಸಲಾಗುತ್ತದೆ.

ಈ ಸೌಲಭ್ಯವನ್ನು ಪಡೆಯಲು ಸಾರ್ವಜನಿಕರು ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 0820-2526709 ಗೆ ಸಂಪರ್ಕಿಸಬಹುದಾಗಿದೆ.

ಈ ಯೋಜನೆ ವೈಯಕ್ತಿಕ ಮನೆಗಳಿಗೆ ಮಾತ್ರ ಅನ್ವಯವಾಗಿದ್ದು, ಅಪಾರ್ಟ್‌ಮೆಂಟ್ ಹಾಗೂ ಬಹುಮಹಡಿ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಅಲ್ಲದೆ ಮನೆಗೆ ಸಂಬಂಧಿಸಿದ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.