Home Crime ವಿಟ್ಲ: ಅಕ್ರಮ ಪಡಿತರ ಅಕ್ಕಿ ದಾಸ್ತಾನು ಪತ್ತೆ : ವ್ಯಕ್ತಿ ಅರೆಸ್ಟ್ : ಆಟೋರಿಕ್ಷಾ ವಶ…!!

ವಿಟ್ಲ: ಅಕ್ರಮ ಪಡಿತರ ಅಕ್ಕಿ ದಾಸ್ತಾನು ಪತ್ತೆ : ವ್ಯಕ್ತಿ ಅರೆಸ್ಟ್ : ಆಟೋರಿಕ್ಷಾ ವಶ…!!

ವಿಟ್ಲ : ಕಸಬಾ ಗ್ರಾಮದ ಶಿವಾಜಿ ನಗರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಇಟ್ಟಿದ್ದ ಆರೋಪದ ಮೇಲೆ ಒಬ್ಬನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಆಹಾರ ನಿರೀಕ್ಷಕ ಎ. ಪ್ರಶಾಂತ ಶೆಟ್ಟಿ ಅವರಿಗೆ ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರದಲ್ಲಿ ಆಟೋರಿಕ್ಷಾದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಇಡಲಾಗಿದೆ ಎಂಬ ಮಾಹಿತಿ ಆಧರಿಸಿ ಆಹಾರ ಇಲಾಖೆ ಸಿಬ್ಬಂದಿ ಹಾಗೂ ವಿಟ್ಲ ಪೊಲೀಸ್ ಠಾಣಾ ಉಪ ನಿರೀಕ್ಷಕ ರಾಮಕೃಷ್ಣ ಮತ್ತು ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿದ್ದ ಕೆಎ-70-ಎ-2034 ನಂಬರಿನ ಆಟೋರಿಕ್ಷಾದಲ್ಲಿ 15 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 679.38 ಕೆಜಿ ಪಡಿತರ ಅಕ್ಕಿ ತುಂಬಿಸಿರುವುದು ಕಂಡುಬಂದಿದೆ. ಅಕ್ಕಿಯ ಅಂದಾಜು ಮೌಲ್ಯ ₹23,098 ಎಂದು ತಿಳಿದುಬಂದಿದೆ.

ಸ್ಥಳದಲ್ಲಿದ್ದ ವಿಟ್ಲ ಕಸಬಾ ಗ್ರಾಮದ ನಿವಾಸಿ ಅಲಿ ಅಕ್ಬರ್ (40)ಎಂಬಾತನನ್ನು ವಿಚಾರಿಸಿದಾಗ, ತಾನೇ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪತ್ತೆಯಾದ ಅಕ್ಕಿ ಹಾಗೂ ಆಟೋರಿಕ್ಷಾವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.