ಮಲ್ಪೆ : ಉಡುಪಿ ಜಿಲ್ಲೆಯ ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಅವರಿಗೆ ಯುವಕರಿಬ್ಬರು ಚೂರಿ ಇರಿದ ಘಟನೆ ಇಂದು ರಾತ್ರಿ ಮಲ್ಪೆಯಲ್ಲಿ ಸಂಭವಿಸಿದೆ.
ಗಾಯಗೊಂಡ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.ಆದರ್ಶ್ ಆಸ್ಪತ್ರೆಯಲ್ಲಿ ಮಂಜು ಅವರಿಗೆ ಚಿಕಿತ್ಸೆ ನಡೆಯುತ್ತಿದೆ.
ಹಿಂದೂ ಯುವಸೇನೆಯ ಮುಖಂಡ, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜುಕೊಳ ಅವರು ಇಂದು ಬೀಚ್ ಬಳಿ ಜೋಡಿಯೊಂದರ ಪ್ರೇಮದ ವಿಚಾರವಾಗಿ ರಾಜಿಪಂಚಾಯಿತಿಗೆ ಕರೆದಿದ್ದರು.ಧನುಷ್ ಎಂಬ ಯುವಕನ ವಿಚಾರದಲ್ಲಿ ಈ ಜಗಳ ನಡೆದಿದೆ.
ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ಯುವಕ ಚೂರಿ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಹೊಟ್ಟೆ ಭಾಗಕ್ಕೆ ಇರಿದ ಪರಿಣಾಮ ಅಲ್ಲೆ ಕುಸಿದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳು ಪಲಿಮಾರು ನಿವಾಸಿಗಳಾದ ಪ್ರಜ್ಞೇಶ್, ಪುನೀತ್,ಅಮೃತ್ ಭಂಡಾರಿ, ಅಭಿಜಿತ್ ಹಾಗೂ ಇನೋರ್ವ ಇದ್ದ ಎಂದು ತಿಳಿಯಲಾಗಿದೆ. ಮಲ್ಪೆ ಪೊಲೀಸರು 5 ಮಂದಿ ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಅದರಲ್ಲಿ ಬಂಧಿತ ಇಬ್ಬರು ಯುವಕರ ಮೇಲೆ ಈ ಹಿಂದೆ ಎರಡು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಯಲಾಗಿದೆ.



