ಕಡಬ: ಐತೂರು ಗ್ರಾಮದ ಕೆರ್ಮಾಯಿ ಎಂಬಲ್ಲಿ ಮತಾಂತರ ಮತ್ತು ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲಿ ಅಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಮೇ 7ರಂದು ಕೆರ್ಮಾಯಿಯ ಮನೆಯೊಂದರಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸೇರಿಸಿಕೊಂಡು ಮತಾಂತರ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಡಬ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ನಾಲ್ಕು ಕುಟುಂಬಗಳಿಗೆ ಸೇರಿದ ಒಟ್ಟು 23 ಮಂದಿ (ಪುರುಷರು, ಮಹಿಳೆಯರು ಮತ್ತು ಮಕ್ಕಳು) ಕಂಡುಬಂದಿದ್ದಾರೆ. ಇವರೆಲ್ಲರೂ ಬೆಂಗಳೂರು ಮೂಲದ ಪರಿಚಯಸ್ಥರಾಗಿದ್ದು, ಪ್ರವಾಸಕ್ಕಾಗಿ ಮಂಗಳೂರಿಗೆ ಬಂದಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ಬೆಂಗಳೂರಿನ ಚರ್ಚ್‌ವೊಂದರ ಫಾದರ್ ಅವರ ಸಹೋದರನ ಮನೆಯಲ್ಲಿ ಈ ತಂಡ ವಾಸ್ತವ್ಯ ಹೂಡಿತ್ತು. ಹಲವು ವರ್ಷಗಳ ಒಡನಾಟದ ಹಿನ್ನೆಲೆಯಲ್ಲಿ ಅವರು ಇಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಗೆ ಒಳಗಾದವರು ಕಳೆದ 15 ರಿಂದ 20 ವರ್ಷಗಳಿಂದ ಕ್ರಿಶ್ಚಿಯನ್ ಧರ್ಮವನ್ನು ಸ್ವಯಂಪ್ರೇರಿತವಾಗಿ ಪಾಲಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.




