Home Crime ರೌಡಿ ಶೀಟರ್ ಮನೆಗೆ ಮಲ್ಪೆ ಪೊಲೀಸರಿಂದ ದಾಳಿ : ನಕಲಿ ನಂಬರ್ ಪ್ಲೇಟ್ ಕಾರುಗಳು ವಶ..!!

ರೌಡಿ ಶೀಟರ್ ಮನೆಗೆ ಮಲ್ಪೆ ಪೊಲೀಸರಿಂದ ದಾಳಿ : ನಕಲಿ ನಂಬರ್ ಪ್ಲೇಟ್ ಕಾರುಗಳು ವಶ..!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಭಾಗದಲ್ಲಿರುವ ರೌಡಿ ಶೀಟರ್ ಸದಾಫ್ ಜಿ ಮೊಹಮ್ಮದ್ ಮನೆ ಬಳಿ ಪೊಲೀಸರು ದಾಳಿ ನಡೆಸಿದ ವೇಳೆ, ಆರೋಪಿ ಮನೆಯ ಟೆರೆಸ್‌ನಿಂದ ಪಕ್ಕದ ಶೆಡ್ ಮೇಲ್ಚಾವಣಿಗೆ ಜಿಗಿದು ತಪ್ಪಿಸಿಕೊಂಡಿರುವ ಘಟನೆ ನಡೆದಿದೆ.

ಮಲ್ಪೆ ಠಾಣೆಯ ಪಿಎಸ್‌ಐ ಅನಿಲ್ ಹಾಗೂ ಗಂಗಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಸ್ಥಳೀಯರ ಮಾಹಿತಿಯ ಮೇರೆಗೆ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಒಂದು ಹುಂಡೈ ಐ20 ಕಾರಿಗೆ ಮಾರುತಿ ಸುಜುಕಿ ಬಲೆನೊ ಕಾರಿನ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಪತ್ತೆಯಾಗಿದೆ. ಜೊತೆಗೆ ಹೊಂಡಾ ಸಿಟಿ ಮತ್ತು ಸ್ವಿಫ್ಟ್ ಕಾರುಗಳ ಮೇಲೂ ಅನುಮಾನ ವ್ಯಕ್ತವಾಗಿದೆ.

ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಮೂರು ಕಾರುಗಳನ್ನು ಪೊಲೀಸರು ಮಹಜರು ನಡೆಸಿ ವಶಪಡಿಸಿಕೊಂಡಿದ್ದಾರೆ.

ಆರೋಪಿ ಸದಾಫ್ ಜಿ ಮೊಹಮ್ಮದ್ ಈಗಾಗಲೇ ದನ ಕಳ್ಳತನ ಹಾಗೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಕಲಿ ನಂಬರ್ ಪ್ಲೇಟ್ ಬಳಸಿ ತೆರಿಗೆ ತಪ್ಪಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಮಲ್ಪೆ, ಹೂಡೆ ಹಾಗೂ ಬೆಂಗ್ರೆ ಪರಿಸರದಲ್ಲಿ ದನ ಕಳ್ಳತನ ಹೆಚ್ಚುತ್ತಿದ್ದು ಆ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸರು ರೌಡಿ ಶೀಟರ್ ಮನೆಗೆ ದಾಳಿ ನಡೆಸಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.