ಉಳ್ಳಾಲ: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಉಳ್ಳಾಲ ಸೋಮೇಶ್ವರದ ಯುವಕನೊಬ್ಬ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಮೃತ ಯುವಕ ಎಂದು ತಿಳಿಯಲಾಗಿದೆ.
ಅವರು ಕಳೆದ ಒಂದೂವರೆ ವರ್ಷಗಳಿಂದ ಒಮಾನ್ ದೇಶದಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು ಮರಳಿ ಒಮಾನ್ ಗೆ ಹಿಂತಿರುಗಿದ್ದರು.
ಮಾಹಿತಿಯ ಪ್ರಕಾರ, ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಉರ್ವಾದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಯುವತಿ ಫೋನ್ ಕರೆಗಳನ್ನು ಸ್ವೀಕರಿಸದೇ, ಸಂದೇಶಗಳಿಗೆ ಪ್ರತಿಕ್ರಿಯೆ ನೀಡದೇ ಇದ್ದ ಹಿನ್ನೆಲೆಯಲ್ಲಿ ಪುನೀತ್ ಮನನೊಂದಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಈ ವಿಷಯವನ್ನು ತಮ್ಮ ಗೆಳೆಯರ ಬಳಿಯೂ ಅವರು ಹಂಚಿಕೊಂಡಿದ್ದರು. ಪ್ರೀತಿ ದೂರವಾದ ನೋವಿನಲ್ಲಿ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆoದು ತಿಳಿದುಬಂದಿದೆ.



