Home Latest ಉಡುಪಿ ಬಾರ್‌ಗಳಲ್ಲಿ ಅಗ್ನಿ ಸುರಕ್ಷತೆ ಕಡ್ಡಾಯ : ಅಬಕಾರಿ ಇಲಾಖೆ ಎಚ್ಚರಿಕೆ…!!

ಉಡುಪಿ ಬಾರ್‌ಗಳಲ್ಲಿ ಅಗ್ನಿ ಸುರಕ್ಷತೆ ಕಡ್ಡಾಯ : ಅಬಕಾರಿ ಇಲಾಖೆ ಎಚ್ಚರಿಕೆ…!!

ಉಡುಪಿ : ಮೈಸೂರಿನ ಬಾರ್ ಒಂದರಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಉಡುಪಿ ಅಬಕಾರಿ ಇಲಾಖೆ ಜಿಲ್ಲೆಯ ಸನ್ನದುದಾರರು ಹಾಗೂ ಬಾರ್ ಮಾಲೀಕರಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದೆ.

ಉಡುಪಿ ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯ ಸನ್ನದುದಾರರು ಹಾಗೂ ಬಾರ್ ಮಾಲೀಕರಿಗೆ ಅಗ್ನಿ ಸುರಕ್ಷತೆ ಕುರಿತು ನಡೆದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅಬಕಾರಿ ಡಿಸಿ, ಟಿ.ಎಂ. ಶ್ರೀನಿವಾಸ್ ಅವರು, ಅವಘಡಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಪ್ರತಿಯೊಬ್ಬ ಸನ್ನದುದಾರನ ಜವಾಬ್ದಾರಿ ಎಂದರು. ಜಿಲ್ಲೆಯ ಕೆಲ ಬಾರ್‌ಗಳು ನಿಗದಿತ ಅವಧಿಗೂ ಮುನ್ನ ಹಾಗೂ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದ್ದು, ಕಳೆದ ಒಂದು ವರ್ಷದಲ್ಲಿ ಇಂತಹ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಹೆಚ್ಚುವರಿ ದರ ವಸೂಲಿಯ ಕುರಿತು ದೂರುಗಳೂ ಬಂದಿದ್ದು, ಸರ್ಕಾರ ನಿಗದಿಪಡಿಸಿದ ದರಗಳ ಪ್ರಕಾರವೇ ಮದ್ಯ ಮಾರಾಟ ಮಾಡಬೇಕು; ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಜುಲೈ ತಿಂಗಳಿಂದ ಮದ್ಯ ಮಾರಾಟ ಪರವಾನಗಿ (ಲೈಸೆನ್ಸ್) ನವೀಕರಣ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬಾರಿ ಸಮಗ್ರ ಪರಿಶೀಲನೆ ಬಳಿಕವೇ ನವೀಕರಣಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ವಿಶೇಷ ಕಾರ್ಯಗಾರದಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಬೆಂಕಿ ಅವಘಡಗಳನ್ನು ತಡೆಗಟ್ಟುವ ಕ್ರಮಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಸುರಕ್ಷತಾ ವಿಧಾನಗಳ ಕುರಿತು ಮಾಹಿತಿ ನೀಡಿದರು. ಪ್ರತಿಯೊಂದು ಬಾರ್‌ನಲ್ಲಿ ಅಗ್ನಿ ನಿರೋಧಕ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಅವುಗಳನ್ನು ಗ್ರಾಹಕರಿಗೆ ಸುಲಭವಾಗಿ ಕಾಣುವ ಸ್ಥಳಗಳಲ್ಲಿ ಇರಿಸಬೇಕು ಎಂದು ಸೂಚಿಸಲಾಯಿತು.