ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕರ್ಕುಂಜೆ – ನೆಲ್ಲಿಮುಕ್ಕಿ ಸಂಪರ್ಕಿಸುವ ಸಾರ್ವಜನಿಕ ರಸ್ತೆಯಲ್ಲಿ, ಮಾಲತಿ ಅವರ ಮನೆಗೆ ಹೋಗುವ ಮಾರ್ಗದಲ್ಲಿ ಹ್ಯೂಮ್ ಪೈಪ್ ಬಳಸಿ ನಿರ್ಮಿಸಲಾದ ಮೋರಿ ಕಾಮಗಾರಿ ಸರಿಯಾದ ತಾಂತ್ರಿಕ ಮಾನದಂಡಗಳನ್ನು ಪಾಲಿಸದೇ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೂರು ಅಡಿ ಸಿಮೆಂಟ್ ಪೈಪ್ ಅಳವಡಿಸಿ ಮಾಡಿರುವ ಈ ಕಾಮಗಾರಿ ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯದಂತೆ ತಡೆಯುತ್ತಿದ್ದು, ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.ಈ ಸಮಸ್ಯೆಯಿಂದ ನೆಲ್ಲಿಮುಕ್ಕಿಯಿಂದ ನೆಂಪು ಸರಕಾರಿ ಶಾಲೆಗೆ ಹೋಗುವ ಮಕ್ಕಳು ಹಾಗೂ ಹಿರಿಯರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆ ದುಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ.ಸ್ಥಳೀಯರ ಆರೋಪದಂತೆ, ಈ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯ ಸುಕುಮಾರ ಮೊಗವೀರ ಅವರು ಹಲವು ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿದ್ದು, ಈ ಬಗ್ಗೆ ಪ್ರಶ್ನಿಸಿದವರಿಗೆ ಧಮ್ಕಿ ನೀಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎನ್ನಲಾಗಿದೆ. “ಯಾರಿಗಾದರೂ ಹೇಳಿಕೊಳ್ಳಿ, ನನಗೆ ಭಯವಿಲ್ಲ” ಎಂಬ ರೀತಿಯಲ್ಲಿ ದಾದಾಗಿರಿ ತೋರಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮಾಲತಿ ಮೊಗವೀರ ಮಾಧ್ಯಮದ ಮುಂದೆ ಆರೋಪಿಸಿದ್ದಾರೆ.
ಈ ಕಾಮಗಾರಿ 2024-25ನೇ ಸಾಲಿನ 15ನೇ ಹಣಕಾಸು ಆಯೋಗದ ಕ್ರಿಯಾ ಯೋಜನೆಯಡಿಯಲ್ಲಿ ನಡೆದಿದ್ದು, ಸಾರ್ವಜನಿಕರ ಉಪಯೋಗಕ್ಕಿಂತ ಕೆಲವರ ಅನುಕೂಲಕ್ಕೆ ಮಾಡಿರುವಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೈಂದೂರು ಕ್ಷೇತ್ರದ ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲವಾದರೆ, ತಮ್ಮದೇ ಪಕ್ಷದ ಕಾರ್ಯಕರ್ತರ ದುರ್ವರ್ತನೆಗೆ ಕಡಿವಾಣ ಹಾಕದಿದ್ದರೆ ಜನರ ಆಕ್ರೋಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ






