Home Karavali Karnataka 2000ಕ್ಕೂ ಹೆಚ್ಚು ನಾಸಾ ಹಿರಿಯ ಅಧಿಕಾರಿಗಳ ರಾಜೀನಾಮೆ…!!

2000ಕ್ಕೂ ಹೆಚ್ಚು ನಾಸಾ ಹಿರಿಯ ಅಧಿಕಾರಿಗಳ ರಾಜೀನಾಮೆ…!!

ವಾಷಿಂಗ್ಟನ್: ನಾಸಾದಲ್ಲಿ ಉನ್ನತ ಹುದ್ದೆಯಲ್ಲಿರುವ 2145 ಮಂದಿ ಸಾಮೂಹಿಕ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅತ್ಯುನ್ನತ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇದೀಗ ಅನುಭವಿಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಪೊಲಿಟಿಕೊ ವರದಿ ಮಾಡಿದೆ.

ಉನ್ನತ ವ್ಯವಸ್ಥಾಪನಾ ಮತ್ತು ತಾಂತ್ರಿಕ ನೈಪುಣ್ಯತೆ ಹುದ್ದೆಯಲ್ಲಿದ್ದ ಜಿಎಸ್-13 ಶ್ರೇಣಿಯಿಂದ ಜಿಎಸ್-15 ಶ್ರೇಣಿಯವರೆಗಿನ ಅಧಿಕಾರಿಗಳು ನಾಸಾ ತ್ಯಜಿಸಲಿದ್ದು, ಇವರಲ್ಲಿ 875 ಮಂದಿ ಜಿಎಸ್-15 ಸಿಬ್ಬಂದಿ ಸೇರಿದ್ದಾರೆ. ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ವಿ‌ಸ್ತೃತ ಪ್ರಯತ್ನದ ಭಾಗವಾಗಿ ನಾಸಾದಿಂದ ಅವಧಿಪೂರ್ವ ನಿವೃತ್ತಿ, ಮುಷ್ಕರ ಅಥವಾ ವಿಳಂಬಿತ ರಾಜೀನಾಮೆಗೆ ಮುಂದಾಗಿರುವ 2694 ಮಂದಿಯ ಪೈಕಿ ಬಹುತೇಕ ಮಂದಿ ತಾಂತ್ರಿಕ ತಜ್ಞರು ಸೇರಿದ್ದಾರೆ.

ನಾಸಾದ ಮಹತ್ವಾಕಾಂಕ್ಷಿ ಸೈನ್ಸ್ ಅಂಡ್ ಹ್ಯೂಮನ್ ಸ್ಪೇಸ್ ಫ್ಲೈಟ್ ಯೋಜನೆಯ ಕರ್ತವ್ಯದಿಂದ 1818 ಮಂದಿ ನಿರ್ಗಮಿಸುತ್ತಿದ್ದಾರೆ. ಇದರ ಜತೆಗೆ ಐಟಿ ಮತ್ತು ಹಣಕಾಸು ವಿಭಾಗದ ಹಲವು ಮಂದಿಯೂ ನಾಸಾ ತೊರೆಯುತ್ತಿದ್ದಾರೆ. “ಏಜೆನ್ಸಿಯ ಪ್ರಮುಖ ವ್ಯವಸ್ಥಾಪನಾ ಮತ್ತು ತಾಂತ್ರಿಕ ನೈಪುಣ್ಯತೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ” ಎಂದು ಪ್ಲಾನಿಟರಿ ಸೊಸೈಟಿಯ ಬಾಹ್ಯಾಕಾಶ ನೀತಿ ವಿಭಾಗದ ಮುಖ್ಯಸ್ಥ ಕ್ಯಾಸಿ ಡ್ರೀಯರ್ ಎಚ್ಚರಿಸಿದ್ದಾರೆ. ಉದ್ಯೋಗ ಕಡಿತ ತಂತ್ರಗಾರಿಕೆಯನ್ನು ಅವರು ಪ್ರಶ್ನಿಸಿದ್ದಾರೆ.

2026ರ ಶ್ವೇತಭವನ ಬಜೆಟ್ ನಲ್ಲಿ ನಾಸಾದ ಅನುದಾನವನ್ನು ಶೇಕಡ 25ರಷ್ಟು ಕಡಿತಗೊಳಿಸುವ ಪ್ರಸ್ತಾವವಿದ್ದು, 5 ಸಾವಿರ ಸಿಬ್ಬಂದಿಯನ್ನು ಕಡಿತಗೊಳಿಸಲೂ ನಿರ್ಧರಿಸಲಾಗಿದೆ. ಇದರಿಂದಾಗಿ 1960ರ ದಶಕದಲ್ಲಿ ಪುಟ್ಟ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾಗಿ ಆರಂಭವಾದಾಗ ಇದ್ದ ಗಾತ್ರಕ್ಕೇ ಇಳಿಯಲಿದೆ. ಎಲ್ಲ 10 ನಾಸಾ ಪ್ರಾದೇಶಿಕ ಕೇಂದ್ರಗಳಿಗೂ ಇದರಿಂದ ತೊಂದರೆಯಾಗಲಿದ್ದು, ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ 607 ಸಿಬ್ಬಂದಿಯನ್ನು ಕಳೆದುಕೊಳ್ಳಲಿದೆ. ಉಳಿದಂತೆ ಜಾನ್ಸನ್ ಸ್ಪೇಸ್ ಟೆಂಟರ್ (366), ಕೆನಡಿ ಸ್ಪೇಸ್ ಸೆಂಟರ್ (311), ನಾಸಾ ಕೇಂದ್ರ ಕಚೇರಿ (307), ಲಾಂಗ್ಲೆ ರಿಸರ್ಚ್ ಸೆಂಟರ್ (281), ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್ (279) ಮತ್ತು ಗ್ಲೆನ್ ರಿಸರ್ಚ್ ಸೆಂಟರ್ (191) ಕೂಡಾ ಗಣನೀಯ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕಳೆದುಕೊಳ್ಳಲಿದೆ.