Home Kundapura News ಬೈಂದೂರು ಮನೆಕಳ್ಳತನ ಪ್ರಕರಣ : ಅಂತರಾಜ್ಯ ಕಳ್ಳನ ಬಂಧನ, ₹2.81 ಲಕ್ಷ ಮೌಲ್ಯದ ಚಿನ್ನ ವಶಕ್ಕೆ..!

ಬೈಂದೂರು ಮನೆಕಳ್ಳತನ ಪ್ರಕರಣ : ಅಂತರಾಜ್ಯ ಕಳ್ಳನ ಬಂಧನ, ₹2.81 ಲಕ್ಷ ಮೌಲ್ಯದ ಚಿನ್ನ ವಶಕ್ಕೆ..!

ಬೈಂದೂರು : ಪಡುವರಿ ಗ್ರಾಮದ ಗುರುಕಿರಣ್‌ ಪಟ್ವಾಲ್‌ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯ ಬಾಗಿಲನ್ನು ಮುರಿದು ಒಳನುಗ್ಗಿ, ಕೋಣೆಯಲ್ಲಿದ್ದ ಗೋಡ್ರೇಜ್‌ ಅಲಮಾರಿಯಲ್ಲಿ ಇರಿಸಿದ್ದ ಚಿನ್ನಾಭರಣಗಳು ಹಾಗೂ ನಗದು ಕಳವು ಮಾಡಿಕೊಂಡು ದಿನಾಂಕ 05-03-2026 ರಂದು ಹಗಲು ವೇಳೆ ಪರಾರಿಯಾಗಿದ್ದರು. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್‌ ಬಿ. ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿತ್ತು. ದಿನಾಂಕ 21-04-2026 ರಂದು ಈ ತಂಡವು ಪ್ರಕರಣದ ಆರೋಪಿಯಾಗಿರುವ ಅಂತರಾಜ್ಯ ಕಳ್ಳ ಉಮೇಶ್‌ ಬಳೆಗಾರ @ ಉಮೇಶ್‌ ಪಿ @ ಉಮೇಶ್‌ ರೆಡ್ಡಿ (ತಂದೆ: ಪ್ರಭಾಕರ), ಜುಮ್ಮಾ ಮಸೀದಿ ಬಳಿ, ಫಕೀರನ ಕಟ್ಟೆ, ಮಲ್ಲಾರು, ಕಾಪು ನಿವಾಸಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತನಿಖೆಯ ವೇಳೆ ಆರೋಪಿ ಕಳವು ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡಿನ ಮದುರೈ ಭಾಗದಲ್ಲಿ ಮಾರಾಟ ಮಾಡಲು ಗಟ್ಟಿಮಾಡಿಸಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದರಿಂದ, ತನಿಖಾಧಿಕಾರಿ ಹಾಗೂ ತಂಡವು ಮದುರೈಗೆ ತೆರಳಿ ಆರೋಪಿಯಿಂದ ಸುಮಾರು ₹2.81 ಲಕ್ಷ ಮೌಲ್ಯದ ಒಟ್ಟು 22 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಉಮೇಶ್‌ ಬಳೆಗಾರ ಅಂತರರಾಜ್ಯ ಮಟ್ಟದಲ್ಲಿ ರೂಡಿಗತ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 8 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಇನ್ನೂ 23 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿ ಬಾಕಿಯಾಗಿದೆ.

ಈ ಕಾರ್ಯಾಚರಣೆಯನ್ನು ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಬೈಂದೂರು ಸಿಪಿಐ ಶಿವಕುಮಾರ್‌ ಬಿ. ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಬೈಂದೂರು, ಕೊಲ್ಲೂರು ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಗಳ ಪಿಎಸ್‌ಐಗಳು, ಎಎಸ್‌ಐ ಹಾಗೂ ಸಿಬ್ಬಂದಿ, ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಬೆರಳುಮುದ್ರೆ ವಿಭಾಗದ ಅಧಿಕಾರಿಗಳು ಸಹಕರಿಸಿದ್ದಾರೆ.