ಕಡಬ : “ರಾಜಕೀಯವಾಗಿ ನನ್ನ ಮೇಲೆ ಹಗೆ ಸಾಧಿಸಲು ಕಾಂಗ್ರೆಸ್ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ. ಆದರೆ ದೈವದ ಅಭಯ ಇರುವವರೆಗೆ ನನಗೆ ಯಾವುದೇ ಭಯವಿಲ್ಲ,” ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸವಣೂರಿನ ಇರ್ವೆರು ಉಳ್ಳಾಕ್ಲು ಹಾಗೂ ಕೆಡೆಂಜೊಡಿತ್ತಾಯಿ ದೈವಸ್ಥಾನದಲ್ಲಿ ಬುಧವಾರ ರಾತ್ರಿ ನಡೆದ ಹರಕೆ ನೇಮೋತ್ಸವದಲ್ಲಿ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಕುಟುಂಬಸ್ಥರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.
“ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಹಕರಿಸಿದ್ದಕ್ಕೆ ಕಾಂಗ್ರೆಸ್ ನನ್ನನ್ನು ಗುರಿಯಾಗಿಸಿಕೊಂಡಿತು. 12 ವರ್ಷಗಳ ಕಾಲ ರಾಜಕೀಯದಿಂದ ದೂರವಿದ್ದರೂ, ಅಂಜನಾದ್ರಿ ಹನುಮಂತನ ಆಶೀರ್ವಾದದಿಂದ ಮತ್ತೆ ಶಾಸಕನಾಗಿ ಆಯ್ಕೆಯಾಗಿದ್ದೇನೆ,” ಎಂದರು.

ಹರಕೆ ಸೇವೆಯ ಸಂದರ್ಭದಲ್ಲಿ ದೈವವು ರೆಡ್ಡಿಯವರಿಗೆ ಅಭಯ ನುಡಿಯನ್ನಾಡಿದ್ದು, “ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವಿರಿ. ಮುಂದಿನ ಮೇ 15ರ ಒಳಗಾಗಿ ನಿಮ್ಮ ಎಲ್ಲಾ ವಿಘ್ನಗಳು ನಿವಾರಣೆಯಾಗಲಿವೆ,” ಎಂದು ಭರವಸೆ ನೀಡಿದೆ. ಇದೇ ಸಂದರ್ಭದಲ್ಲಿ ರೆಡ್ಡಿ ಅವರು ತಮ್ಮ ದೇಣಿಗೆಯಿಂದ ನಿರ್ಮಿಸಲಾದ ಸಮುದಾಯ ಭವನವನ್ನು ಉದ್ಘಾಟಿಸಿದರು. ಸುಮಾರು ಐದು ಗಂಟೆಗಳ ಕಾಲ ದೈವದ ನರ್ತನ ಸೇವೆಯನ್ನು ವೀಕ್ಷಿಸಿದ ರೆಡ್ಡಿ ಕುಟುಂಬ ಭಾವುಕರಾದರು.





