Home Crime ಮಂಗಳೂರು : ಮೀನುಗಾರರ ಸಾಲ ಮನ್ನಾ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ…!!

ಮಂಗಳೂರು : ಮೀನುಗಾರರ ಸಾಲ ಮನ್ನಾ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ…!!

ಮಂಗಳೂರು: ಉಡುಪಿ ಜಿಲ್ಲೆಯ ವಿವಿಧ ಮೀನುಗಾರರ ಸ್ವಸಹಾಯ ಗುಂಪುಗಳ ಹೆಸರಿನಲ್ಲಿ ವಂಚನೆಯಿಂದ ಪಡೆದ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ, ಮಂಗಳೂರು ಉಪ ವಲಯ ಜಾರಿ ನಿರ್ದೇಶನಾಲಯವು 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ, ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌, ಶ್ರೀಮತಿ ಬೇಬಿ, ಹರೀಶ್‌, ಪಿ ರಾಮದಾಸ್‌ ಮತ್ತು ರಾಮಕೃಷ್ಣ ಪಿ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ.

ರಾಜ್ಯ ಸರಕಾರ ಜಾರಿಗೆ ತಂದಿರುವ ಸಾಲ ಮನ್ನಾ ಯೋಜನೆಯನ್ನು ಬಳಸಿಕೊಂಡು ಅನರ್ಹ ಮೀನುಗಾರರ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಿದ್ದಕ್ಕಾಗಿ ಶ್ರೀಮತಿ ಬೇಬಿ ಕೊಟಾರಿ, ಹರೀಶ್‌ ಖಾರ್ವಿ, ರಾಮದಾಸ ಖ್ರಾವಿ ಮತ್ತು ರಾಮಕೃಷ್ಣ ದೇವಾಡಿಗ ವಿರುದ್ಧ ಇತ್ತೀಚೆಗೆ ಉಡುಪಿಯ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದೀಗ ಈ ಎಫ್‌ಐಆರ್‌ ಆಧಾರದ ಮೇಲೆ ಇದೀಗ ಇಡಿ ತನಿಖೆ ಆರಂಭ ಮಾಡಿದೆ.

2017-18 ರ ಹಣಕಾಸು ವರ್ಷದಲ್ಲಿ ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಮೂಲಕ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ವಿವಿಧ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿದ್ದಾರೆ. ಸಾಲದ ಕಂತಿನ ಮೊತ್ತವನ್ನು ಬ್ಯಾಂಕಿನಲ್ಲಿ ಸಂಗ್ರಹಿಸಿಟ್ಟು ನಂತರ ಮರುಪಾವತಿ ಮಾಡಲು ಸಹಾಯ ಮಾಡಿದ್ದರು ಎಂದು ಇಡಿ ತನಿಖೆಯಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಆರೋಪಿಗಳು ಸ್ವಸಹಾಯ ಗುಂಪುಗಳು ನೀಡಿದ ಸಂಪೂರ್ಣ ಮರುಪಾವತಿ ಮೊತ್ತವನ್ನು ಹಾಗೆಯೇ ಠೇವಣಿ ಇಡಲು ವಿಫಲರಾಗಿದ್ದು ಮತ್ತು ಕಂತುಗಳ ಒಂದು ಭಾಗದ ಮೊತ್ತವನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳುವ ಮೂಲಕ ಸ್ವಸಾಹಯ ಗುಂಪುಗಳಿಗೆ ಮೋಸ ಮಾಡಿದ್ದರು.

ಈ ವಂಚನೆಯನ್ನು ಮುಚ್ಚಿಹಾಕಲು ಆರೋಪಿಗಳು ಯುಬಿಐ ಬ್ಯಾಂಕ್‌ ವ್ಯವಸ್ಥಾಪಕ ರಾಮಕೃಷ್ಣ ಪಿ ಸಹಭಾಗಿತ್ವದಲ್ಲಿ ರಾಜ್ಯ ಸರಕಾರ ಮೀನುಗಾರರ ಸ್ವಸಹಾಯ ಗುಂಪುಗಳಿಗಾಗಿ ಪರಿಚಯ ಮಾಡಿದ ಸಾಲ ಮನ್ನಾ ಯೋಜನೆಯಡಿಯಲ್ಲಿ, ಸರಿಯಾದ ದಾಖಲೆಗಳಿಲ್ಲದೆ 58 ಅನರ್ಹ ಸ್ವಸಹಾಯ ಗುಂಪುಗಳಿಗೆ ಸಾಲ ಮನ್ನಾ ಅರ್ಜಿ ಸಲ್ಲಿಸಿದ್ದರು. ಈ ಮೂಲಕ ಆರೋಪಿಗಳು 1.66 ಕೋಟಿ ರೂ. ಅಕ್ರಮ ಆದಾಯ ಗಳಿಸಿದ್ದರು. ನಂತರ ಇದರ ಒಂದು ಭಾಗವನ್ನು ಅನರ್ಹ ಸ್ವಸಹಾಯ ಗುಂಪುಗಳ ಸಾಲಗಳನ್ನು ವಸೂಲಿ ಮಾಡಲು ಬಳಸಿಕೊಂಡಿದ್ದು, ಉಳಿದ ಹಣವನ್ನು ವಿವಿಧೋದ್ದೇಶಗಳಿಗೆ ಬಳಸಿರುವುದಾಗಿ ವರದಿಯಾಗಿದೆ.

ಆರೋಪಿಗಳ ವಿರುದ್ಧ ಇದೀಗ 2002 ರ ಸೆಕ್ಷನ್‌ 3ರ ಅಡಿಯಲ್ಲಿ ಮತ್ತು ಸೆಕ್ಷನ್‌ 4 ರ ಅಡಿಯಲ್ಲಿ ಶಿಕ್ಷಾರ್ಹ ಹಣ ವರ್ಗಾವಣೆ ಆರೋಪಕ್ಕೆ ದೂರು ದಾಖಲು ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.