Home Crime ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯ ಹತ್ಯೆ…!

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯ ಹತ್ಯೆ…!

ಕಾರವಾರ : 3-4 ಜನರ ತಂಡವಿಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಘಟನೆ ಮುಂಡಗೋಡ ಬಸ್ ನಿಲ್ದಾಣದ ಎದುರಿರುವ ಹೋಟೆಲ್‌ವೊಂದರಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನೂರಾನಿಗಲ್ಲಿ ನಿವಾಸಿ ಝಮೀರ್ ಅಹ್ಮದ್ ದರ್ಗಾವಾಲೆ (ಎನ್‌ಎಂಡಿ) (38) ಹತ್ಯೆಗೀಡಾದವರು.

ರಾತ್ರಿ ಸುಮಾರು 11 ಗಂಟೆಗೆ ಝಮೀರ್ ಅವರು ಸ್ನೇಹಿತನೊಂದಿಗೆ ಹೋಟೆಲ್‌ಗೆ ಬಂದಿದ್ದಾಗ, ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಜಮೀರ್ ಪ್ರಯತ್ನಿಸಿದರೂ ಸಾಧ್ಯವಾಗದೆ, ಹೋಟೆಲ್‌ನ ಅಡುಗೆ ಕೋಣೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಇವರನ್ನು ಅಪಹರಿಸಲಾಗಿತ್ತು, ಆಗ ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನು ರಕ್ಷಿಸಿದ್ದರು ಎಂದು ತಿಳಿದು ಬಂದಿದೆ.

ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯರಾತ್ರಿಯೇ ಬಸ್ ನಿಲ್ದಾಣದ ಬಳಿ ನೂರಾರು ಜನರು ಜಮಾಯಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಘಟನಾ ಸ್ಥಳಕ್ಕೆ ಶಿರಸಿ ಡಿಎಸ್‌ಪಿ ಗೀತಾ ಪಾಟೀಲ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರಕ್ಕೆ ಕಳುಹಿಸಲಾಗಿದೆ.

ಈ ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಮೃತ ಝಮೀರ್ ಮೇಲೆ ಬೆಟ್ಟಿಂಗ್ ಸೇರಿದಂತೆ ಒಟ್ಟು ಐದು ಪ್ರಕರಣಗಳಿದ್ದವು ಎಂದು ಎಸ್.ಪಿ. ಮಾಹಿತಿ ನೀಡಿದ್ದಾರೆ.