Home Crime ಆಡಿಯೋ ವೈರಲ್ : ರಾತ್ರೋರಾತ್ರಿ ಮನೆಗೆ ನುಗ್ಗಿ ಸ್ನೇಹಿತನನ್ನೇ ಹತ್ಯೆಗೈದ ಹಂತಕರು ಅರೆಸ್ಟ್…!!

ಆಡಿಯೋ ವೈರಲ್ : ರಾತ್ರೋರಾತ್ರಿ ಮನೆಗೆ ನುಗ್ಗಿ ಸ್ನೇಹಿತನನ್ನೇ ಹತ್ಯೆಗೈದ ಹಂತಕರು ಅರೆಸ್ಟ್…!!

ಉಡುಪಿ: ಸ್ನೇಹಿತರೆಂಬ ಮುಖವಾಡದ ಹಿಂದೆ ಅಡಗಿದ್ದ ಪ್ರತೀಕಾರದ ಕಥೆ ಉಡುಪಿಯಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಆಡಿಯೋವೊಂದನ್ನು ವೈರಲ್ ಮಾಡಿದ ಆರೋಪದಲ್ಲಿ, ಮೂವರು ಸ್ನೇಹಿತರು ಮನೆಯೊಳಗೆ ನುಗ್ಗಿ ದೋಸ್ತಿಯನ್ನೇ ಕೊಲೆಗೈದ ಘಟನೆ ಆ. 12ರ ರಾತ್ರಿ ಪುತ್ತೂರು ಗ್ರಾಮದ ಸುಬ್ರಮಣ್ಯನಗರ 9ನೇ ಅಡ್ಡರಸ್ತೆಯಲ್ಲಿ ನಡೆದಿದೆ.

ವಿನಯ್ ದೇವಾಡಿಗ (40) ಕೊಲೆಯಾದ ವ್ಯಕ್ತಿ. ಈತ ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಬ್ರಹ್ಮಾವರ ಕೊಕ್ಕರ್ಣೆಯ ಗಾಂಧಿನಗರ ನಿವಾಸಿಗಳಾದ ಅಕ್ಷೇಂದ್ರ ಯಾನೆ ಅಕ್ಷಯ್ (34), ಅಜಿತ್ (28), ಹಾಗೂ ಕೊಕ್ಕರ್ಣೆ ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ ಬಂಧಿತ ಆರೋಪಿಗಳು. ಈ ಘಟನೆ ಉಡುಪಿಯಲ್ಲಿ ಭೀತಿಯ ವಾತಾವರಣ ನಿರ್ಮಿಸಿದ್ದು, “ಸ್ನೇಹಿತ” ಎಂಬ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ

ವಿನಯ್ ದೇವಾಡಿಗ ರವರು ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಮಣ್ಯ ನಗರದ 9ನೇ ಅಡ್ಡರಸ್ತೆಯಲ್ಲಿ ವಾಸಮಾಡಿಕೊಂಡಿದ್ದು, ಆಗಸ್ಟ್ 12 ರಂದು ಬೆಳಿಗ್ಗೆ 10:00 ಗಂಟೆಗೆ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿ ಹೋಗಿ ರಾತ್ರಿ 8:30 ಗಂಟೆಗೆ ಕೆಲಸವನ್ನು ಮುಗಿಸಿ ಮನೆಗೆ ಬಂದಿದ್ದು, ಆ ಸಮಯ ವಿನಯ್ ದೇವಾಡಿಗ ರವರ ಮೊಬೈಲ್ ಸಂಖ್ಯೆಗೆ ನಿರಂತರ ದೂರವಾಣಿ ಕರೆಗಳು ಬರುತ್ತಿದ್ದರು ಸ್ವೀಕರಿಸದೇ ಇದ್ದುದ್ದನ್ನು ಪತ್ನಿ ಸೌಮ್ಯ ಗಮನಿಸಿದ್ದು, ಮಗಳು ನವ್ಯಾ ರವರು ತಂದೆಯ ಮೊಬೈಲ್ ನ್ನು ಸೈಲೆಂಟ್ ಮೋಡ್ ನಲ್ಲಿ ಇಟ್ಟಿರುತ್ತಾಳೆ. ನಂತರ ರಾತ್ರಿ 9:30 ಗಂಟೆಗೆ ವಿನಯ್ ರವರನ್ನು ಊಟ ಮಾಡುವುದಕ್ಕೆ ಏಬ್ಬಿಸಿದ್ದು, ಆಗ ವಿನಯ್ ರವರು ನನಗೆ ಸ್ವಲ್ಪ ಕೆಲಸವಿದೆ ನಾನು ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿದಕ್ಕೆ ಈಗ ರಾತ್ರಿಯಾಯ್ತು ನಾಳೆ ಹೋಗಿ ಎಂದಿದ್ದಕ್ಕೆ ವಿನಯ್ ಒಪ್ಪಿದ್ದು, ಊಟ ಮಾಡಿ ರಾತ್ರಿ 10:00 ಗಂಟೆಗೆ ವಿನಯ್ ದೇವಾಡಿಗ, ಪತ್ನಿ ಹಾಗೂ ಮಗಳು ನವ್ಯಾ ರವರು ಮನೆಯ ಹಾಲ್ ಎದುರಿಗೆ ಇರುವ ಕೋಣೆಯಲ್ಲಿ ಮಲಗಿದ್ದು, ಪಕ್ಕದ ಕೋಣೆಯಲ್ಲಿ ವಿನಯ್ ರವರ ತಾಯಿ ಸುಕನ್ಯಾ ರವರು ಮಲಗಿರುತ್ತಾರೆ.

ರಾತ್ರಿ 11:15 ಗಂಟೆಗೆ ಮನೆಯ ಗೇಟನ್ನು ಯಾರೋ ತೆರದಂತೆ ಶಬ್ದವಾಗಿದ್ದು, ಮನೆಯ ದ್ವಾರಕ್ಕೆ ಕೈಯಿಂದ ಜೋರಾಗಿ ಬಡಿದ ಶಬ್ದ ಉಂಟಾಗಿದ್ದು, ವಿನಯ್ ರವರ ಪತ್ನಿ, ಅತ್ತೆ ಸುಕನ್ಯಾ ರವರನ್ನು ಎಬ್ಬಿಸಿ ಮನೆಯ ಬಾಗಿಲನ್ನು ತೆರೆದು ನೋಡಿದಾಗ ಪರಿಚಯವಿದ್ದ ಆಕ್ಷೇಂದ್ರ, ಅಜಿತ್ ಮತ್ತು ಪರಿಚಯವಿಲ್ಲದ ಇನ್ನೊರ್ವ ವ್ಯಕ್ತಿಯು ಬೆನ್ನ ಹಿಂದೆ ಕೈಗಳನ್ನು ಕಟ್ಟಿ ”ವಿನಯ ಎಲ್ಲಿದ್ದಾನೆ, ವಿನಯ್ ಎಲ್ಲಿದ್ದಾನೆ” ಎಂದು ಕೇಳಿದ್ದಕ್ಕೆ ಪತ್ನಿ ವಿನಯ್ ರವರು ಮನೆಯಲ್ಲಿ ಇಲ್ಲ ಹೊರಗಡೆ ಹೋಗಿರುವುದಾಗಿ ತಿಳಿಸಿದರೂ ಕೂಡ ಪತ್ನಿಯ ಮಾತನ್ನು ಲೆಕ್ಕಿಸದೇ ಮೂವರು ಮನೆಯ ಒಳಗೆ ಬಂದಿದ್ದು, ಅಕ್ಷೇಂದ್ರನ ಕೈಯಲ್ಲಿ ಮಚ್ಚು, ಅಜಿತ್ ನ ಕೈಯಲ್ಲಿ ದೊಡ್ಡ ಕತ್ತಿ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಚಾಕು ಇದ್ದು, ಅವರುಗಳು ಮನೆಯ ಎಲ್ಲಾ ಕಡೆಗಳಲ್ಲಿ ವಿನಯ್ ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಪತ್ನಿ ಅವರಲ್ಲಿ “ಏನಾದರೂ ತಪ್ಪಾಗಿದ್ದರೆ ನಾಳೆ ಮಾತನಾಡುವ , ಇವತ್ತು ಇಲ್ಲಿಂದ ಹೋಗಿ ಎಂದು ಹೇಳಿದರೂ ಅದನ್ನು ಲೆಕ್ಕಿಸದೇ ಮನೆಯ ಹಾಲ್ ನ ಎದುರು ಇದ್ದ ಕೋಣೆಯ ಬಾಗಿಲನ್ನು ತೆರೆದಿದ್ದು, ಆ ಸಮಯ ಕೋಣೆಯಲ್ಲಿದ್ದ ವಿನಯ್ ರವರು ಬಾಗಿಲನ್ನು ತೆರೆದ ಶಬ್ದದಿಂದ ಎಚ್ಚರಗೊಂಡಿದ್ದು, ಆರೋಪಿತರು ವಿನಯ್ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಳ್ಳಲು ಪ್ರಯತ್ನಪಟ್ಟಿದ್ದು, ನಂತರ ಅಜಿತ್ ವಿನಯ್ ನನ್ನು ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆ ಸಮಯ ಆಕ್ಷೇಂದ್ರ ನು ತಾನು ತಂದಿದ್ದ ಮಚ್ಚು ಹಾಗೂ ಇನ್ನೋರ್ವ ವ್ಯಕ್ತಿಯು ತಾನು ತಂದಿದ್ದ ಚಾಕುವಿನಿಂದ ವಿನಯ್ ದೇವಾಡಿಗ ರವರ ತಲೆಯನ್ನು ಕಡಿದಿದ್ದು, ತಲೆಯಲ್ಲಿ ಸೀಳಿದ ಗಾಯ ಉಂಟಾಗಿದ್ದು, ಎರಡೂ ಕೈ ಮತ್ತು ಮೊಣಕೈಗಳಿಗೆ ಮತ್ತು ಅಲ್ಲಲ್ಲಿ ಚಾಕು ಮತ್ತು ಮಚ್ಚಿನಿಂದ ಕಡಿದ ಪರಿಣಾಮ ಗಾಯದಿಂದ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲಿಯೇ ವಿನಯ್ ಮೃತಪಟ್ಟಿದ್ದು ಆ ಸಮಯ ಕೋಣೆಯಲ್ಲಿದ್ದ ಮಗಳು ನವ್ಯಾ ರವರು ಹೆದರಿ ಓಡಿ ಹೊರಗೆ ಬಂದಿದ್ದು, ನಂತರ ಆರೋಪಿತರುಗಳು ಬಂದಿದ್ದ ಸ್ಕೂಟರ್ ನ್ನು ಸ್ಟಾರ್ಟ್ ಮಾಡಿಕೊಂಡು ರಾತ್ರಿ 11:30 ಗಂಟೆಗೆ ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆಯಾದ ಆರೋಪಿ ವಿನಯ್ ದೇವಾಡಿಗ ಈ ಹಿಂದೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀ ನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪ್ರಸ್ತುತ ನ್ಯಾಯಾಲಯದ ಜಾಮೀನು ಪಡೆದಿರುತ್ತಾನೆ.

ಪ್ರಕರಣದ ಮೂರನೇ ಆರೋಪಿ ಪ್ರದೀಪ್‌ ಆಚಾರ್ಯ ಬ್ರಹ್ಮಾವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು, ಪ್ರಕರಣ ಖುಲಾಸೆಯಾಗಿರುತ್ತದೆ.

ಸದ್ರಿ ಕೃತ್ಯಕ್ಕೆ ವಿನಯ್ ರವರು ಆರೋಪಿ ಆಕ್ಷೇಂದ್ರನಿಗೆ ಯಾರೋ ಬೈದಿರುವ ವಿಡಿಯೋವನ್ನು ಬೇರೆಯವರಿಗೆ ಶೇರ್ ಮಾಡಿದ್ದ ಎನ್ನುವ ಕಾರಣಕ್ಕೆ ಆರೋಪಿಗಳಾದ ಅಕ್ಷೇಂದ್ರ, ಅಜಿತ್ ಮತ್ತು ಪ್ರದೀಪ ಆಚಾರ್ಯ ಸೇರಿಕೊಂಡು ವಿನಯ್ ರವರನ್ನು ಕೊಲೆ ಮಾಡಿ ಸೇಡು ತೀರಿಸಿಕೊಂಡಿರುವುದಾಗಿದೆ.