ಬೆಂಗಳೂರು: ರಾಜಧಾನಿಯ ಜನನಿಬಿಡ ಪ್ರದೇಶವಾದ ಲುಲು ಮಾಲ್ ಮುಂಭಾಗದಲ್ಲಿ ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಬೆಂಕಿಗಾಹುತಿಯಾದ ಭೀಕರ ಘಟನೆ ನಡೆದಿದೆ.
ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆ ಹಾಗೂ ಸಾರ್ವಜನಿಕರ ಎಚ್ಚರಿಕೆಯಿಂದ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ರಾತ್ರಿ ಸುಮಾರು 10:15ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕರ್ನಾಟಕ ಸಾರಿಗೆ ಬಸ್, 10:20ರ ಸುಮಾರಿಗೆ ಲುಲು ಮಾಲ್ ಮುಂಭಾಗ ತಲುಪುತ್ತಿತ್ತು. ಈ ವೇಳೆ ಬಸ್ಸಿನ ಕೆಳಭಾಗದಲ್ಲಿ ಹಠಾತ್ತಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಬಸ್ ಚಾಲಕನಿಗೆ ಕಿರುಚಾಡಿ ವಿಷಯ ತಿಳಿಸಿದ್ದಾರೆ.
ಬೆಂಕಿ ಹತ್ತಿಕೊಂಡಿರುವುದನ್ನು ಅರಿತ ಚಾಲಕ ತಕ್ಷಣ ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ, ಪ್ರಯಾಣಿಕರಿಗೆ ಇಳಿಯುವಂತೆ ಸೂಚಿಸಿದ್ದಾರೆ. ಗಾಬರಿಗೊಂಡ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಬೆಂಕಿ ಬಸ್ಸಿನಾದ್ಯಂತ ವ್ಯಾಪಿಸಿ ಧಗಧಗನೆ ಉರಿಯತೊಡಗಿದೆ.
ಬಸ್ ಹೊತ್ತಿ ಉರಿದ ಪರಿಣಾಮ ಮೆಜೆಸ್ಟಿಕ್‌ನಿಂದ ಲುಲು ಮಾಲ್ ಸಂಪರ್ಕಿಸುವ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.





