Home Crime ಬೈಕ್ ನಲ್ಲಿ ತಾಯಿಗೆ ಡಿಕ್ಕಿ ಹೊಡೆದ ಮಗ : ಮಗನ ವಿರುದ್ಧ ದೂರು ದಾಖಲು…!!

ಬೈಕ್ ನಲ್ಲಿ ತಾಯಿಗೆ ಡಿಕ್ಕಿ ಹೊಡೆದ ಮಗ : ಮಗನ ವಿರುದ್ಧ ದೂರು ದಾಖಲು…!!

ಕಡಬ: ಮಗನೊಬ್ಬ ತಾನು ಚಲಾಯಿಸುತ್ತಿದ್ದ ಬೈಕ್ ಮೂಲಕ ತನ್ನ ತಾಯಿಗೆ ಡಿಕ್ಕಿ ಮಾಡಿಸಿದ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಬೀರಂತಡ್ಕ ಎಂಬಲ್ಲಿ ನಡೆದಿದೆ.

ಈ ಘಟನೆಯಲ್ಲಿ ತಾಯಿಗೆ ಗಂಭೀರ ಗಾಯವಾಗಿದ್ದು, ಮಗನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ನಿವಾಸಿ ಚೇತನಾ ಬಿ. ಎಂಬುವವರು ನೀಡಿದ್ದು, ಏಪ್ರಿಲ್ 4 ರಂದು ಸಂಜೆ ಸುಮಾರು 4:15ಕ್ಕೆ ಚೇತನಾ ಅವರ ಅಣ್ಣ ದಯಾನಂದ್ ಎಂಬುವವರು ತಮ್ಮ ತಾಯಿಯನ್ನು ಬೈಕ್ ನಲ್ಲಿ ಕುಳ್ಳಿರಿಸಿಕೊಂಡು ಅಜ್ಜಿಯನ್ನು ನೋಡಲು ಹೊರಟಿದ್ದರು. ಮನೆಯಿಂದ ಸುಮಾರು ನೂರು ಅಡಿ ದೂರದ ಇಳಿಜಾರು ರಸ್ತೆಯಲ್ಲಿ ತಾಯಿಯನ್ನು ಬೈಕಿನಿಂದ ಕೆಳಗಿಳಿಸಿ, ಸ್ವಲ್ಪ ದೂರ ನಡೆದುಕೊಂಡು ಹೋಗುವಂತೆ ದಯಾನಂದ್‌ ತಿಳಿಸಿದ್ದರು. ಆದರೆ, ದಯಾನಂದ್ ತನ್ನ ಬೈಕನ್ನು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಪುಷ್ಪಾವತಿ ಅವರಿಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದ ತೀವ್ರತೆಗೆ ಪುಷ್ಪಾವತಿ ಅವರ ತಲೆ ಮತ್ತು ಎದೆಯ ಭಾಗಕ್ಕೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಅಲಂಕಾರಿನ ಕ್ಲಿನಿಕ್ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಣ್ಣ ಮಗು ಇದ್ದ ಕಾರಣ ದೂರು ನೀಡಲು ತಡವಾಗಿದ್ದಾಗಿ ದೂರುದಾರೆ ತಿಳಿಸಿದ್ದಾರೆ. ಪ್ರಸ್ತುತ ಕಡಬ ಪೊಲೀಸರು ಬೈಕ್ ಸವಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281 ಮತ್ತು 125(a) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.