ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ….
ಉಡುಪಿ: ಮೈಸೂರು ಕಂಬಳಕ್ಕೆ ಅವಕಾಶ ನೀಡಿ, ಕಾಪು ಕ್ಷೇತ್ರದ ಕಂಬಳಕ್ಕೆ ಅನುಮತಿ ನಿರಾಕರಿಸಿರುವುದು ಸರಿಯೇ ಎಂದು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮೈಸೂರು ಕಂಬಳದ ವಿಚಾರ ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ತಮ್ಮ ಕ್ಷೇತ್ರದಲ್ಲಿ ಕೋಟಿ-ಚೆನ್ನಯ್ಯರ ಹೆಸರಿನಲ್ಲಿ ಕಂಬಳ ಆಯೋಜಿಸಲು ತೀರ್ಮಾನಿಸಲಾಗಿತ್ತು. ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಕರಾವಳಿಯ ಶಾಸಕರು ಹಾಗೂ ಸಂಸದರು ಭಾಗವಹಿಸಿದ್ದರೂ, ಬಳಿಕ 144ನೇ ಸೆಕ್ಷನ್ ಜಾರಿಗೊಳಿಸಿ ಕಾರ್ಯಕ್ರಮಕ್ಕೆ ತಡೆ ನೀಡಲಾಯಿತು ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಜನಪ್ರತಿನಿಧಿಗಳು ಸೇರಿದಂತೆ 37 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಉಡುಪಿಯಲ್ಲಿ ಕಂಬಳಕ್ಕೆ ತಡೆ ವಿಧಿಸಿ, ಮೈಸೂರಿನಲ್ಲಿ ಕಂಬಳ ಆಯೋಜಿಸಲು ಮುಂದಾಗಿರುವ ಸರ್ಕಾರದ ಧೋರಣೆ “ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ” ಹಚ್ಚುವಂತಿದೆ ಎಂದು ಟೀಕಿಸಿದರು.
ಮೈಸೂರು ಕಂಬಳಕ್ಕೆ ₹8 ಕೋಟಿ ಮೀಸಲಿಟ್ಟಿರುವುದು ಸಂತೋಷದ ವಿಷಯ. ಆದರೆ ಕರಾವಳಿಯ ಕಂಬಳಕ್ಕೆ ಕೇವಲ ₹5 ಲಕ್ಷ ಮಾತ್ರ ನೀಡಲಾಗಿದೆ. ಉಡುಪಿ ಕಂಬಳದ ಅಭಿವೃದ್ಧಿ ಕುರಿತು ಯಾವುದೇ ವಿಶೇಷ ಪ್ರಸ್ತಾಪ ಮಾಡಿಲ್ಲ.
ಉಡುಪಿ ಕಂಬಳಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಮೊಕದ್ದಮೆಗಳ ಬಗ್ಗೆ ಸರ್ಕಾರ ಕ್ಷಮೆ ಕೇಳಬೇಕು. ಅಲ್ಲದೆ, ಉಡುಪಿಯ ಬಡಗುಬೆಟ್ಟಿನಲ್ಲಿ ಕಂಬಳ ಆಯೋಜಿಸಲು ತಕ್ಷಣ ಅವಕಾಶ ನೀಡಬೇಕು ಎಂದು ಗುರ್ಮೆ ಸುರೇಶ್ ಶೆಟ್ಟಿ ಆಗ್ರಹಿಸಿದರು.




