ಶಂಕರನಾರಾಯಣ: ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ ಜೊತೆಗೆ ಕೊಲೆ ಯತ್ನ ನಡೆಸಿದ ಆರೋಪದ ಮೇಲೆ ಅಸಿಸ್ಟೆಂಟ್ ಪ್ರೊಫೆಸರ್ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಡ್ಡಿನಬೈಲು ಅಂಪಾರು ಗ್ರಾಮದ ನಿಶಿತಾ ಶೆಟ್ಟಿ (26) ಅವರು ನೀಡಿದ ದೂರಿನ ಪ್ರಕಾರ, 2021ರ ಫೆಬ್ರವರಿ 19ರಂದು ಕೆಂಚನೂರು ಗ್ರಾಮದ ಜಯರಾಮ ಶೆಟ್ಟಿಯವರೊಂದಿಗೆ ವಿವಾಹವಾಗಿದ್ದು, ದಂಪತಿಗಳು ಉಪ್ಪೂರಿನ ಉಗ್ಗೇಲಬೆಟ್ಟುವಿನಲ್ಲಿ ವಾಸವಾಗಿದ್ದರು. ಇವರಿಗೆ ಝಾನಿಯಾ ಮತ್ತು ನೈರಾ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ದೂರಿನ ಪ್ರಕಾರ, ಆರೋಪಿ ಜಯರಾಮ ಶೆಟ್ಟಿಯು ಧರ್ಮಾಂತರಗೊಳ್ಳುವಂತೆ ಒತ್ತಾಯಿಸಿ, ವಿರೋಧ ವ್ಯಕ್ತಪಡಿಸಿದ ಪತ್ನಿಗೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.
ಇತ್ತೀಚೆಗೆ ಎರಡನೇ ಮಗುವಿಗೆ ಜನ್ಮ ನೀಡಿದ ನಿಶಿತಾ ಶೆಟ್ಟಿ ತಮ್ಮ ತಾಯಿಯ ಮನೆಯಲ್ಲಿ ಬಲಾಡಿಯಲ್ಲಿ ವಾಸವಾಗಿದ್ದರು. ಈ ವೇಳೆ ಏಪ್ರಿಲ್ 13ರಂದು ಮನೆಗೆ ಬಂದಿದ್ದ ಆರೋಪಿ, ಏಪ್ರಿಲ್ 18ರಂದು ಬೆಳಿಗ್ಗೆ 10:30ರ ಸುಮಾರಿಗೆ ಚಿಕ್ಕಮ್ಮನ ಮಗ ಮನೆಗೆ ಬಂದ ವಿಚಾರಕ್ಕೆ ಗಲಾಟೆ ಆರಂಭಿಸಿ, ಪತ್ನಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆ ಯತ್ನ ನಡೆಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಮಧ್ಯ ಪ್ರವೇಶಿಸಿದ ತಂದೆ ಸದಾಶಿವ ಶೆಟ್ಟಿ, ಅಣ್ಣ ಸುಜಿತ್ ಹಾಗೂ ಸಂಬಂಧಿ ಶಮಿತ್ ಅವರನ್ನು ಕೂಡ ಆರೋಪಿ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





