ಕಾರ್ಕಳ, ಜೂನ್ 17: ಕುಟುಂಬ ಕಲಹದ ಹಿನ್ನೆಲೆ ಪತ್ನಿಯನ್ನು ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿಯಂತೆ, ನಿಟ್ಟೆ ಗ್ರಾಮದ ನಿವಾಸಿ ವಿಶಾಲಾಕ್ಷಿ (25) ಅವರು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. ವಿಶಾಲಾಕ್ಷಿಯವರ ತಂದೆ ಧರ್ಮ ಹಾಗೂ ತಾಯಿ ಬೇಬಿ ಅವರು ಮನೆಯ ಸಮೀಪವೇ ವಾಸವಾಗಿದ್ದು, ಧರ್ಮ ಅವರು ಪ್ರತಿದಿನ ಪತ್ನಿ ಬೇಬಿಯವರೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಜೂನ್ 15ರಂದು ಸಂಜೆ ಸುಮಾರು 4.45 ಗಂಟೆಗೆ ಧರ್ಮ ಅವರು ಪತ್ನಿಯೊಂದಿಗೆ ಜಗಳವಾಡಿ, “ನಿನ್ನನ್ನು ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿದ ಬಳಿಕ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಬೇಬಿಯವರನ್ನು ಮೊದಲು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




