ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮದ್ಯಾಸಕ್ತಿ ಹಿನ್ನೆಲೆ ಕುಟುಂಬ ಕಲಹದಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಬೈಂದೂರು ತಾಲೂಕಿನ ಶಿರೂರು ಗ್ರಾಮದ ಹಡವಿನಕೋಣೆ ನಿವಾಸಿ ಹಸನಜಿ ಮಹಮದ್ ಮುಸ್ತಕಿಮ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಇವರು ಸುಮಾರು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಸರಿಯಾಗಿ ಹೋಗದೇ ಮದ್ಯಾಸಕ್ತನಾಗಿದ್ದನೆಂದು ತಿಳಿದುಬಂದಿದೆ.
ಮದ್ಯಪಾನದ ವಿಚಾರವಾಗಿ ಗಂಡ-ಹೆಂಡತಿಯ ನಡುವೆ ಪದೇ ಪದೇ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ. ಮಧ್ಯರಾತ್ರಿ ವೇಳೆ ಮದ್ಯಪಾನ ಮಾಡಿ ಮನೆಗೆ ಬಂದ ಮುಸ್ತಕಿಮ್ ಅವರನ್ನು ತಡವಾಗಿ ಬಂದ ಬಗ್ಗೆ ಪತ್ನಿ ಪ್ರಶ್ನಿಸಿದ್ದಾಳೆ. ಇದರಿಂದ ಬೇಸರಗೊಂಡ ಆತ ಮನೆಯ ಹೊರಗಿನ ಜಗುಲಿಯಲ್ಲಿ ಮಲಗಿದ್ದು, ಒಳಗಿನಿಂದ ಬಾಗಿಲು ಹಾಕಿಕೊಂಡು ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂದಿನ ದಿನ ಬೆಳಗ್ಗೆ ಘಟನೆ ಗಮನಿಸಿದ ತಂದೆ ಹಾಗೂ ನೆರೆಹೊರೆಯವರು ಬಾಗಿಲು ಒಡೆದು ಒಳನುಗ್ಗಿ ಮೃತದೇಹವನ್ನು ಕೆಳಗಿಳಿಸಿದ್ದಾರೆ. ಮದ್ಯಾಸಕ್ತಿ ಹಾಗೂ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಾರುಣ ನಿರ್ಧಾರಕ್ಕೆ ಬಂದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





