ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ನಾಗರಮಠ ಪ್ರದೇಶದಲ್ಲಿ ಸೀತಾನದಿ ಪಾತ್ರದಲ್ಲಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಇಂದು ಭಾರೀ ಪ್ರತಿಭಟನೆ ನಡೆಸಿದರು. ಅವೈಜ್ಞಾನಿಕ ರೀತಿಯಲ್ಲಿ ಮರಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ ಎಂದು ಆರೋಪಿಸಿ ನಾಗರಮಠದ ನದಿ ತಟದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಸೀತಾನದಿ ಪ್ರದೇಶದಲ್ಲಿ ಪರಿಸರ ಹಾನಿ ಉಂಟಾಗುವ ರೀತಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟಗಾರ ದಿನೇಶ್ ಗಾಣಿಗ, ಸುಮಾರು ಒಂದೂವರೆ ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಲು ಅನುಮತಿ ನೀಡಿರುವುದು ಪರಿಸರಕ್ಕೆ ದೊಡ್ಡ ಅಪಾಯ ಎಂದು ಆರೋಪಿಸಿದರು. ಹತ್ತು ದಿನಗಳ ಹಿಂದೆ ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಮುಂದೆ ಗ್ರಾಮಸ್ಥರು ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದ ಅವರು, ಕಾನೂನುಬದ್ಧವಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಚಂದ್ರ ಕಾಂಚನ್, ಕೃಷ್ಣ ಬಂಗೇರಾ, ಗಿರಿಜಾ ರಂಗ ಮರಕಾಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.





