Home Crime ಬೈಂದೂರು: ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ಯುತ್ತಿದ್ದ ದುಷ್ಕರ್ಮಿ : ಸುಮೋಟೋ ಪ್ರಕರಣ…!!

ಬೈಂದೂರು: ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ಯುತ್ತಿದ್ದ ದುಷ್ಕರ್ಮಿ : ಸುಮೋಟೋ ಪ್ರಕರಣ…!!

ಬೈಂದೂರು: ತನ್ನ ಸಾಕು ನಾಯಿಯನ್ನು ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ ದರದರನೇ ಎಳೆದೊಯ್ಯುತ್ತಿರುವ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ

ಶನಿವಾರ ಸಂಜೆ ವೇಳೆಯಲ್ಲಿ ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತನ್ನ ಸಾಕು ನಾಯಿಯನ್ನು ಅತ್ಯಂತ ಕ್ರೂರವಾಗಿ ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ 2 ಕಿಮೀ ದೂರದವರೆಗೆ ಎಳೆದೊಯ್ಯುತ್ತಾನೆ.ಈ ಘಟನೆ ಎಲ್ಲಾರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಘಟನೆಯ ವಿಚಾರ ತಿಳಿದ ಬೈಂದೂರು ಪೊಲೀಸರು ಆತನ ವಿರುದ್ದ  ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಪಡುವರಿ ನಿವಾಸಿ ಸುಬ್ರಹ್ಮಣ್ಯ ಎಂದು ತಿಳಿದು ಬಂದಿದೆ.

ಬೈಂದೂರು ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

ಘಟನೆ ವಿವರ:

ಬೈಂದೂರು ತಾಲೂಕು ಯಡ್ತರೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು – ಕುಂದಾಪುರ ಏಕಮುಖ ರಸ್ತೆಯ ಪೂರ್ವ ಬದಿಯ ಸರ್ವೀಸ್‌ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯಾದ ಓರ್ವ ವ್ಯಕ್ತಿಯು ನಾಯಿಯೊಂದನ್ನು ಆತನ ಮೋಟಾರ್‌ ಸೈಕಲಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯಾವಳಿಯಿರುವ ವಿಡಿಯೋವನ್ನು ದಿನಾಂಕ 25-05-2025 ರಂದು ಸಾಮಾಜಿಕ ಜಾಲತಾಣವಾದ ಯೂ ಟ್ಯೂಬ್‌ನಲ್ಲಿ ಬಿತ್ತರಿಸಿದ್ದು, ಈ ವಿಡಿಯೋವನ್ನು ಗಮನಿಸಲಾಗಿ ನಾಯಿಯನ್ನು ಕಟ್ಟಿಕೊಂಡು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ ನಂಬ್ರ KA 20 L 5450 ಆಗಿದ್ದು, ಆ ವ್ಯಕ್ತಿಯ ಹೆಸರು ವಿಳಾಸವನ್ನು ತಿಳಿಯಲಾಗಿ , ಸುಬ್ರಹ್ಮಣ್ಯ, ಪಡುವರಿ ಗ್ರಾಮ, ಬೈಂದೂರು ಎಂಬುದಾಗಿ ತಿಳಿದು ಬಂದಿರುತ್ತದೆ. ಮೂಕಪ್ರಾಣಿಯನ್ನು ಈ ರೀತಿಯಾಗಿ ಹಿಂಸಾತ್ಮಕ ರೀತಿಯಲ್ಲಿ ಎಳೆದಾಡಿಕೊಂಡು ಹೋಗಿರುವುದರಿಂದ ನಾಯಿಯು ಗಾಯಗೊಂಡಿರುವುದು ವಿಡಿಯೋ ವೀಕ್ಷಣೆಯಿಂದ ಕಂಡು ಬರುತ್ತದೆ. ಈತನ ವಿರುದ್ಧ ಬೈಂದೂರು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು, ಬೈಂದೂರು ಪೊಲೀಸ್ ಠಾಣಾ ಅಪರಾಧ ಪ್ರಕರಣ 109/2025 ಕಲಂ 325 BNS and 11 (1)(D) Prevention of Cruelty to animal act 1960 ರಂತೆ ಪ್ರಕರಣ ದಾಖಲೆಗಳಾಗಿದೆ.

ತನಿಖೆ ಮುಂದುವರೆದಿರುತ್ತದೆ.