Home Crime ಮೂಡುಬಿದಿರೆ : ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳ ಸಾಗಾಟ : ಎರಡು ವಾಹನ ವಶಕ್ಕೆ…!!

ಮೂಡುಬಿದಿರೆ : ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳ ಸಾಗಾಟ : ಎರಡು ವಾಹನ ವಶಕ್ಕೆ…!!

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ತೋಡಾರು ಬಳಿ ರವಿವಾರ ಅಕ್ರಮವಾಗಿ ಹಾಗೂ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಮೂಡುಬಿದಿರೆ ಪೊಲೀಸರು ಭೇದಿಸಿದ್ದಾರೆ.

ಕಾರ್ಯಾಚರಣೆಯ ವೇಳೆ ಎಂಟು ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಎರಡು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂಡುಬಿದಿರೆ ಠಾಣೆಯ ಪಿ.ಎಸ್.ಐ. ಪ್ರತಿಭಾ ಕೆ.ಸಿ. ಹಾಗೂ ಸಿಬ್ಬಂದಿ ರವಿವಾರ ಗಸ್ತು ಕರ್ತವ್ಯದಲ್ಲಿದ್ದಾಗ, ತೋಡಾರು ಕಡೆಗೆ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತೋಡಾರು ಗ್ರಾಮದ ದ್ವಾರದ ಬಳಿ ಕಾವಲು ನಿಂತಿದ್ದರು ಎನ್ನಲಾಗಿದೆ.

ಈ ವೇಳೆ ಗರಡಿ ಕಡೆಯಿಂದ ವೇಗವಾಗಿ ಬಂದ ವ್ಯಾಗನರ್ ಕಾರು ಹಾಗೂ ಅದರ ಹಿಂದೆಯೇ ಇದ್ದ ಪಿಕಪ್ ವಾಹನವನ್ನು ತಡೆಯಲು ಪೊಲೀಸರು ಸೂಚಿಸಿದರು. ಆದರೆ, ಚಾಲಕರು ಪೊಲೀಸರ ಸೂಚನೆಯನ್ನು ಲೆಕ್ಕಿಸದೆ ವಾಹನವನ್ನು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದರು. ತಕ್ಷಣ ಪೊಲೀಸರು ವಾಹನಗಳನ್ನು ಬೆನ್ನಟ್ಟಿ ಹೋಗಿ ಅಡ್ಡಗಟ್ಟುವಲ್ಲಿ ಯಶಸ್ವಿಯಾದರು.

ಪೊಲೀಸರು ವಾಹನಗಳನ್ನು ಅಡ್ಡಗಟ್ಟುತ್ತಿದ್ದಂತೆ ಪಿಕಪ್ ಚಾಲಕ ಹರ್ಷದ್, ಬೆಂಗಾವಲಾಗಿ ಬಂದಿದ್ದ ಕಾರಿನಲ್ಲಿದ್ದ ಚಾಲಕ ಸಫರ್ ಮತ್ತು ಹಂಡೇಲು ನಿವಾಸಿ ಅಬೂಬಕರ್ ಎಂಬುವವರು ವಾಹನಗಳನ್ನು ಬಿಟ್ಟು ಓಡಿ ಪರಾರಿಯಾಗಿದ್ದಾರೆ.

ಪೊಲೀಸರು ಪಿಕಪ್ ವಾಹನವನ್ನು ತಪಾಸಣೆ ನಡೆಸಿದಾಗ ದಾರುಣ ದೃಶ್ಯ ಕಂಡುಬಂದಿದೆ. ವಾಹನದೊಳಗೆ ಎರಡು ಹಸುಗಳು, ಎರಡು ಎತ್ತುಗಳು ಹಾಗೂ ನಾಲ್ಕು ಗಂಡು ಕರುಗಳನ್ನು ಕಾಲು ಮತ್ತು ತಲೆಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿ, ಅತ್ಯಂತ ಹಿಂಸಾತ್ಮಕವಾಗಿ ತುಂಬಲಾಗಿತ್ತು. ಸದ್ಯ ರಕ್ಷಿಸಲಾದ ಜಾನುವಾರುಗಳನ್ನು ಸುರಕ್ಷಿತ ಕೇಂದ್ರಕ್ಕೆ ರವಾನಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪಿ.ಎಸ್.ಐ. ಪ್ರತಿಭಾ ಕೆ.ಸಿ. ಹಾಗೂ ತಂಡದ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.