ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಸಂಸ್ಥಾಪಕ, ನಟ ದಳಪತಿ ವಿಜಯ್ ಸದ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಕನ್ಯಾಕುಮಾರಿಯಲ್ಲಿ ನಡೆದ ಪ್ರಚಾರದ ವೇಳೆ ಸಂಭವಿಸಿದ ಒಂದು ಸಣ್ಣ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕನ್ಯಾಕುಮಾರಿಯ ಹೆದ್ದಾರಿಯಲ್ಲಿ ವಿಜಯ್ ಅವರು ಸೈಕಲ್ ಸವಾರಿ ಮಾಡುವ ಮೂಲಕ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದರು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಅತೀ ಉತ್ಸಾಹದಿಂದ ವಿಜಯ್ ಅವರತ್ತ ಹೂವಿನ ಮಾಲೆಯನ್ನು ಎಸೆದಿದ್ದಾರೆ. ಹಠಾತ್ತಾಗಿ ತನ್ನತ್ತ ಬಂದ ವಸ್ತುವನ್ನು ಕಂಡು ದಳಪತಿ ವಿಜಯ್ ಗಾಬರಿಗೊಂಡಿದ್ದಾರೆ.
ತಮ್ಮತ್ತ ಬಂದಿದ್ದು ಮಾಲೆ ಎಂದು ತಿಳಿಯದ ವಿಜಯ್, ಅದನ್ನು ‘ಬಾಂಬ್’ ಇರಬಹುದು ಎಂದು ಭಾವಿಸಿ ತಕ್ಷಣ ಸೈಕಲ್ ಬಿಟ್ಟು ಓಡಿ ಕಾರು ಏರಿದ್ದಾರೆ ಎನ್ನಲಾದ ವಿಡಿಯೋ ಈಗ ವೈರಲ್ ಆಗಿದೆ.
ಈ ಘಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. “ವಿಜಯ್ ಅವರು ಅತಿಯಾದ ಆತಂಕದಿಂದ ಬಾಂಬ್ ಎಂದು ಭಾವಿಸಿ ಓಡಿಹೋಗಿದ್ದಾರೆ” ಎಂದು ಕೆಲವರು ಕಾಲೆಳೆದಿದ್ದಾರೆ. “ಅದು ಬಾಂಬ್ ಭಯವಲ್ಲ, ಬದಲಾಗಿ ಅಭಿಮಾನಿಗಳು ಮುತ್ತಿಕೊಳ್ಳಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಅವರು ಕಾರಿನತ್ತ ಧಾವಿಸಿದ್ದಾರೆ” ಎಂದು ವಿಜಯ್ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.






