Home Crime ಭಯೋತ್ಪಾದನಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾಸೀನ್ ಭಟ್ಕಳ ನ್ಯಾಯಾಲಯಕ್ಕೆ ಹಾಜರು…!!

ಭಯೋತ್ಪಾದನಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾಸೀನ್ ಭಟ್ಕಳ ನ್ಯಾಯಾಲಯಕ್ಕೆ ಹಾಜರು…!!

ಮಂಗಳೂರು: 2008ನೇ ಸಾಲಿನಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಭಯೋತ್ಪಾದನಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾಸೀನ್ ಭಟ್ಕಳ @ ಶಾರೂಕ್ @ ಡಾಕ್ಟರ್ ಅರಾಜೂ ಎಂಬಾತನನ್ನು ಈ ದಿನ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈತನ ವಿರುದ್ಧದ ವಿಚಾರಣೆಯು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ ಇದ್ದು, ಈ ಮೂಲಕ ವಿಚಾರಣೆಯು ಪುನಾರಂಭವಾಗಿದೆ.

2008ರ ಅಕ್ಟೋಬರ್ 4ರಂದು, ನಿಷೇಧಿತ ಇಂಡಿಯನ್ ಮುಜಾಹೀದ್ದೀನ್ ಸಂಘಟನೆಯ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಮತ್ತು ಚೆಂಬುಗುಡ್ಡೆ ಪ್ರದೇಶಗಳಲ್ಲಿ ಭಯೋತ್ಪಾದನಾ ಕ್ರಿಯಾಕಲಾಪಗಳನ್ನು ನಿರ್ವಹಿಸುತ್ತಿದ್ದರು ಎಂಬ ಮಾಹಿತಿಯ ಮೇರೆಗೆ, ಡಿಸಿಐಬಿ (DCIB) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದರು.ಸದ್ಯ ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ. 242/2008ರಂತೆ ದಾಖಲಾಗಿ, ಐಎಫ್ಎಕ್ಸ್ ಹಾಗೂ ಇತರ ಸ್ಪೋಟಕ ವಸ್ತುಗಳು ಸಹಿತ ಸಿಕ್ಕಿಬಿದ್ದ ಆರೋಪಿಗಳಲ್ಲಿ ಒಟ್ಟು 7 ಜನರನ್ನು ಬಂಧಿಸಲಾಗಿದ್ದು, ಉಳಿದ 6 ಆರೋಪಿಗಳು ತಲೆಮರೆಸಿಕೊಂಡಿದ್ದರು.

ಈ ಪ್ರಕರಣದಲ್ಲಿ, ಆರೋಪಿಗಳಾದ ಸಯ್ಯದ್ ಮೊಹಮ್ಮದ್ ನೌಶಾದ್, ಅಹಮ್ಮದ್ ಬಾವ ಅಬೂಬಕ್ಕರ್, ಫಕೀರ್ ಅಹಮ್ಮದ್ @ ಫಕೀರ್ ಈ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮತ್ತು ಆರೋಪಿಗಳಾದ ಮೊಹಮ್ಮದ್ ಆಲಿ, ಜಾವೇದ್ ಆಲಿ, ಮೊಹಮ್ಮದ್ ರಫೀಕ್, ಶಬ್ಬೀರ್ ಭಟ್ಕಳ್ ಇವರನ್ನು ಖುಲಾಸೆಗೊಳಿಸಿ ದಿನಾಂಕ 12-04-2017 ರಂದು ಅಂತಿಮ ತೀರ್ಪು ನೀಡಲಾಗಿತ್ತು.

ಆದರೆ ಆರೋಪಿಗಳಲ್ಲಿ ಪ್ರಮುಖನಾದ ಯಾಸೀನ್ ಭಟ್ಕಳ ಪ್ರಕರಣದ ವಿಚಾರಣಾ ಹಂತದಲ್ಲಿ ತಲೆಮರೆಸಿಕೊಂಡಿದ್ದ ಕಾರಣ, ವಿಚಾರಣೆ ಬಾಕಿ ಉಳಿದಿತ್ತು. ಪ್ರಸ್ತುತ, ಯಾಸೀನ್ ಭಟ್ಕಳ ಹೈದರಾಬಾದ್ನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದನು.

ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಸೂಕ್ತ ನೈಜ ಕ್ರಮಗಳನ್ನು ಕೈಗೊಂಡು ತಿಹಾರ್ ಜೈಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಆರೋಪಿಯನ್ನು ದಿನಾಂಕ 24-07-2025 ರಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಹಾಜರುಪಡಿಸಿದ್ದಾರೆ.
ಮುಂದಿನ ವಿಚಾರಣೆ ದಿನಾಂಕ: 20-08-2025 ರಂದು ನಿಗದಿಪಡಿಸಲಾಗಿದೆ.