Home Kundapura News ಕುಂದಾಪುರದಲ್ಲಿ ಮಧ್ಯರಾತ್ರಿ ಅಗ್ನಿ ದುರಂತ : ಮನೆ ಸಂಪೂರ್ಣ ಭಸ್ಮ, ಕೋಟ್ಯಾಂತರ ನಷ್ಟ ಶಂಕೆ…!!

ಕುಂದಾಪುರದಲ್ಲಿ ಮಧ್ಯರಾತ್ರಿ ಅಗ್ನಿ ದುರಂತ : ಮನೆ ಸಂಪೂರ್ಣ ಭಸ್ಮ, ಕೋಟ್ಯಾಂತರ ನಷ್ಟ ಶಂಕೆ…!!

ಕುಂದಾಪುರ, ಎ. 6: ಇಲ್ಲಿನ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಮನೆಯೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.ಹಂದಕುಂದ ಅರೆಕಲ್ಲು ನಿವಾಸಿ ಗಣಪು ಶೆಡ್ತಿ ಎಂಬುವವರ ಮನೆ ಬೆಂಕಿಗಾಹುತಿಯಾದ ದುರ್ದೈವಿ ಮನೆ. ಶನಿವಾರ ರಾತ್ರಿ ಮನೆಯ ಸಮೀಪದ ಬೇರೊಂದು ಮನೆಯಲ್ಲಿ ಭಜನಾ ಕಾರ್ಯಕ್ರಮವಿದ್ದ ಕಾರಣ, ಗಣಪು ಶೆಡ್ತಿ ಹಾಗೂ ಅವರ ಮೊಮ್ಮಗ ಮನೆಗೆ ಬೀಗ ಹಾಕಿ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ಕೆನ್ನಾಲಿಗೆಗೆ ಮನೆಯ ಮಾಡು ಮತ್ತು ಗೋಡೆಗಳು ಕುಸಿದು ಬಿದ್ದಿವೆ. ಮನೆಯೊಳಗಿದ್ದ ಚಿನ್ನಾಭರಣ ಹಾಗೂ ನಗದು ಟಿವಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಬಟ್ಟೆಬರೆ ಹಾಗೂ ಅಡುಗೆ ಪಾತ್ರೆಗಳು ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ.ರಾತ್ರಿ ಸುಮಾರು 12 ಗಂಟೆಯ ನಂತರ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಮುಂಜಾನೆ 2 ಗಂಟೆಯ ಸುಮಾರಿಗೆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿ ಪಕ್ಕದಲ್ಲೇ ಇದ್ದ ದನದ ಕೊಟ್ಟಿಗೆಗೆ ಹರಡದಂತೆ ತಡೆದು ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯವರು ಭಜನೆಗೆ ತೆರಳಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಜೀವನದ ಪೂರ್ತಿ ಗಳಿಕೆ ಬೆಂಕಿಯಲ್ಲಿ ಆಹುತಿಯಾಗಿರುವುದು ಕುಟುಂಬವನ್ನು ಕಂಗಾಲಾಗಿಸಿದೆ.