ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯ ರೌಡಿ ಶೀಟರ್ ಹಾಗೂ ಕುಖ್ಯಾತ “ಗರುಡ ಗ್ಯಾಂಗ್”ನ ಸಕ್ರೀಯ ಸದಸ್ಯ ಮಹಮ್ಮದ್ ಅಲ್ಫಾಜ್ (25)ನನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಆದೇಶ ಹೊರಡಿಸಲಾಗಿದೆ.
ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಸಲ್ಲಿಸಿದ ವರದಿ ಆಧಾರದ ಮೇಲೆ, ಜಿಲ್ಲಾ ದಂಡಾಧಿಕಾರಿಯವರೂ ಆಗಿರುವ ಜಿಲ್ಲಾಧಿಕಾರಿಗಳು ದಿನಾಂಕ 24-04-2026 ರಂದು ಈ ಸಂಬಂಧ ಆದೇಶ ಜಾರಿಗೊಳಿಸಿದ್ದಾರೆ.
ಆರೋಪಿ ಮಹಮ್ಮದ್ ಅಲ್ಫಾಜ್ ತಂದೆ ಮೊಹಮ್ಮದ್ ಅಶ್ರಫ್, ಮೂಲ ನಿವಾಸಿ ಕಿರಿಮಂಜೇಶ್ವರ ಗ್ರಾಮದ ಜನತಾ ಕಾಲೋನಿ, ಅರೆಹೊಳೆ ಕ್ರಾಸ್ ಆಗಿದ್ದು, ಪ್ರಸ್ತುತ ಕುಂದಾಪುರದ ಸಿದ್ದನಾಯ್ಕನ ರಸ್ತೆ, ರಾಮ ಮಂದಿರದ ಬಳಿಯಲ್ಲಿ ವಾಸವಾಗಿದ್ದಾನೆ.
ಆತನ ವಿರುದ್ಧ ಉಡುಪಿ ಜಿಲ್ಲೆಯ ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ ಹಾಗೂ ಕುಂದಾಪುರ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ನೆರೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.
ಒಟ್ಟು 10 ಪ್ರಕರಣಗಳಲ್ಲಿ ಕೊಲೆಯತ್ನ (2), ದರೋಡೆ (1), ದರೋಡೆ ಯತ್ನ (1), ಹಲ್ಲೆ (1), ಅಕ್ರಮ ಕೂಟ (2), ಅಪಹರಣ (1), ಮಾದಕ ವಸ್ತು ಮಾರಾಟ (1) ಹಾಗೂ ಇತರ (1) ಪ್ರಕರಣಗಳು ಸೇರಿವೆ. ಇದರಲ್ಲಿ ಒಂದು ಪ್ರಕರಣ ಖುಲಾಸೆಯಾಗಿದ್ದು, 8 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಇನ್ನೊಂದು ಪ್ರಕರಣ ತನಿಖೆಯಲ್ಲಿದೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಅಧಿಕಾರಿಗಳು ಆದೇಶಿಸಿದ್ದಾರೆ.





