ಉಡುಪಿ: ಇಂದ್ರಾಳಿಯ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಗುಡಿಯಲ್ಲಿ ಭಾನುವಾರ ಅತ್ಯಂತ ವೈಭವದಿಂದ ಬ್ರಹ್ಮಕಲಶೋತ್ಸವ ನೇರವೇರಿತು.
ಅಷ್ಟಬಂಧ ಸಹಿತವಾಗಿ ಪುನಃ ಪ್ರತಿಷ್ಠಾಪಿತ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರಿಗೆ ವೇದಮೂರ್ತಿ ಪುತ್ತೂರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಬ್ರಹ್ಮಕುಂಭಾಭಿಷೇಕ ನೆರವೇರಿಸಲಾಯಿತು.
ಬೆಳಿಗ್ಗೆ ಗಣಹೋಮ, ಪ್ರಧಾನ ಕಲಾ ಸಾನಿಧ್ಯ ಹೋಮ, 1001 ಕಲಶಾರಾಧನೆ, ಪ್ರಸನ್ನ ಪೂಜೆ, ಮಹಾಪೂಜೆ, ಪಲ್ಲ ಪೂಜೆ ಜರುಗಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಶಂಕರ್ ಮತ್ತು ಬಳಗದಿಂದ ಭಕ್ತಿ ಸಂಗೀತ, ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಸಮರ ಸೌಗಂಧಿಕ ತಾಳಮದ್ದಳೆ ನಡೆಯಿತು.

ಸಂಜೆ 7 ಗಂಟೆಗೆ ಮಹಾ ರಂಗಪೂಜೆ, ಮಹಾಮಂತ್ರಾಕ್ಷತೆ ಸಹಿತ ಧಾರ್ಮಿಕ ಕಾರ್ಯಕ್ರಮ ನಡೆದವು.
ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಭೂಪತಿ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಇಂದ್ರಾಣಿ ಶ್ರೀಪಂಚ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ. ಕುಶಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ ಬುಡ್ಡಾರು, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್ ಮಂಚಿ ಕೋಡಿ, ಮಂಚಿ ಪ್ರಭಾಕರ್ ಶೆಟ್ಟಿ, ಇಂದ್ರಾಳಿ ಗೋಪಾಲಕೃಷ್ಣ ಭಟ್, ಶೇಖರ್ ಶೆಟ್ಟಿ ಗೋಪಾಲ ಪೂಜಾರಿ, ಅನಂತ ನಾಯ್ಕ್ ಇಂದ್ರಾಳಿ ಸಹಿತ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.
ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಶ್ರೀ ಮುಖ್ಯಪ್ರಾಣ ದೇವಳಕ್ಕೆ ತೆರಳುವ ಮಾರ್ಗದಲ್ಲಿ ವಾನಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಾವಿರಾರು ಭಕ್ತರು ಪಾನಕ ಸವಿದರು.
ಉಚಿತ ಆಟೋ ರಿಕ್ಷಾ ಸೇವೆ: ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಬ್ರಹ್ಮ ಕುಂಭಾಭಿಷೇಕಕ್ಕೆ ಆಗಮಿಸಿದ್ದ ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್ ಪ್ರದೇಶ ದಿಂದ ಆಂಜನೇಯ ಗುಡಿ ಹಾಗೂ ಇಂದ್ರಾಣಿ ಶ್ರೀಪಂಚದುರ್ಗಾಪರಮೇಶ್ವರಿ ದೇವಳಕ್ಕೆ ಸಾಗುವ ಭಕ್ತರಿಗೆ ಉಚಿತ ಆಟೋ ರಿಕ್ಷಾ ವ್ಯವಸ್ಥೆಯನ್ನು ಕಲಿಸ ಲಾಯಿತು. ದೇವರ ದರ್ಶನಕ್ಕೆ ತೆರಳುವ ಭಕ್ತರು ಈ ವ್ಯವಸ್ಥೆಯ ಪ್ರಯೋಜನ ಪಡೆದುಕೊಂಡರು





