ಹೊಸೂರು: ತಾಲೂಕಿನ ಹೊಸೂರು ಗ್ರಾಮದ ಸರ್ವೇ ನಂಬರ್ 141ರಲ್ಲಿರುವ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸುವ ಯತ್ನ ಹಾಗೂ ಜೆಸಿಬಿ ಬಳಸಿ ಕೆಂಪು ಮಣ್ಣು (ಲೇಟರೈಟ್) ತೆಗೆಯುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಉಚ್ಚ ನ್ಯಾಯಾಲಯದ ಆದೇಶವಿದ್ದರೂ ಸಹ ಅಧಿಕಾರಿಗಳು ಅಕ್ರಮ ತಡೆಯಲು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗಣಪು ಶೇಡ್ತಿ ಎಂಬುವವರು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಜಮೀನಿನಲ್ಲಿ ಜೆಸಿಬಿ ಬಳಸಿ ಕೆಂಪು ಮಣ್ಣು ಸಾಗಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಈ ಜಾಗದ ಕುರಿತು ಈಗಾಗಲೇ ಉಚ್ಚ ನ್ಯಾಯಾಲಯದ ಆದೇಶವಿದ್ದರೂ, ಅದನ್ನು ಧಿಕ್ಕರಿಸಿ ಅಕ್ರಮವಾಗಿ ಲೇಟರೈಟ್ ಕಲ್ಲು ಮತ್ತು ಮಣ್ಣನ್ನು ತೆಗೆಯಲಾಗುತ್ತಿದೆ. ಈ ಕೃತ್ಯದಿಂದ ಸರ್ಕಾರಿ ಸ್ವತ್ತಿಗೆ ಭಾರಿ ಹಾನಿಯಾಗುತ್ತಿದೆ.
ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ವಿಲೇಜ್ ಅಕೌಂಟೆಂಟ್ (V.A) ಮತ್ತು ರೆವೆನ್ಯೂ ಇನ್ಸ್‌ಪೆಕ್ಟರ್ (R.1.) ಅವರಿಗೆ ನಿರಂತರವಾಗಿ ಕರೆ ಮಾಡಿದರೂ, ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಹಸೀಲ್ದಾರ್ ಅವರಿಗೆ ಖುದ್ದಾಗಿ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದರೂ, ಇಲ್ಲಿಯವರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸೌಜನ್ಯವನ್ನೂ ತೋರಿಲ್ಲ ಎಂದು ದೂರಲಾಗಿದೆ.
ಈ ಅಕ್ರಮದ ಕುರಿತು ಪ್ರಶ್ನಿಸಿದ ದಲಿತ ಮುಖಂಡರಿಗೆ ಅಧಿಕಾರಿಗಳು “ಆ ಜಾಗಕ್ಕೆ ಸ್ಟೇ (ತಡೆಯಾಜ್ಞೆ) ಇದೆ” ಎಂದು ಸುಳ್ಳು ಹೇಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. “ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಇದು ಅಕ್ರಮಕೋರರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಸರ್ಕಾರಿ ಜಮೀನಿನ ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣವೇ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಅಕ್ರಮ ಮಣ್ಣು ಗಣಿಗಾರಿಕೆ ತಡೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.






