Home Latest ಸಾಲಿಗ್ರಾಮದಲ್ಲಿ ಮಹಿಳಾ ಯಕ್ಷಗಾನ ಪ್ರದರ್ಶನ : ಮಹಿಳೆಯರು ಯಕ್ಷಗಾನ ಕಲಿತರೆ ಸಂಸ್ಕಾರದ ಮಾರ್ಗ ತೆರೆದಂತೆ :...

ಸಾಲಿಗ್ರಾಮದಲ್ಲಿ ಮಹಿಳಾ ಯಕ್ಷಗಾನ ಪ್ರದರ್ಶನ : ಮಹಿಳೆಯರು ಯಕ್ಷಗಾನ ಕಲಿತರೆ ಸಂಸ್ಕಾರದ ಮಾರ್ಗ ತೆರೆದಂತೆ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಯಕ್ಷಗಾನ ಜ್ಞಾನ ಭಂಡಾರವಿದ್ದoತೆ. ಇಂದಿನ ಆಧುನಿಕ ಸಮಾಜಕ್ಕೆ ಸಂಸ್ಕಾರ ಮಾರ್ಗವನ್ನು ಯಕ್ಷಗಾನದ ಮೂಲಕ ನೀಡಬಹುದು. ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಯಕ್ಷಗಾನ ಕಲಿತ ಮಹಿಳೆ ತನ್ನ ಕುಟುಂಬಕ್ಕೆ, ಸಮಾಜಕ್ಕೆ ಉತ್ತಮ ಸಂಸ್ಕಾರದ ದಾರಿಯನ್ನು ತೋರಬಲ್ಲಳು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

 

ಅವರು ಮಂಗಳವಾರ ಸಾಲಿಗ್ರಾಮ ಗುಂಡ್ಮಿ ಸದಾನಂದ ರಂಗ ಮಂಟಪದಲ್ಲಿ ಕಲಾಪೀಠ ಕೋಟ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಪ್ರಾಯೋಜಕತ್ವದಲ್ಲಿ ಕೆ.ನರಸಿಂಹ ತುಂಗ ಅವರ ನಿರ್ದೇಶನದಲ್ಲಿ ಮಹಿಳೆಯರಿಂದ ಯಕ್ಷಗಾನ ‘ಶೂರ್ಪನಖಾ ಮಾನಭಂಗ ‘ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

 

ಮಕ್ಕಳಿಗೆ ಸಂಸ್ಕಾರವನ್ನು ಬೆಳೆಸಬೇಕಾದರೆ ಯಕ್ಷಗಾನವನ್ನು ಕಲಿಸಿ. ನಮ್ಮ ಪುರಾಣಗಳ ಬಗ್ಗೆ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರವನ್ನು ಕೂಡಾ ನೀಡಿದಂತಾಗುತ್ತದೆ. ಇದರಿಂದ ವೃದ್ಧಾಪ್ಯದಲ್ಲಿ ತಂದೆತಾಯಿಯರು ವೃದ್ಧಾಶ್ರಮವನ್ನು ಸೇರುವ ಪ್ರಮೇಯ ತಪ್ಪುತ್ತದೆ. ನನ್ನ ಮಗ, ಮಗಳು, ಮೊಮ್ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ನೋವನ್ನು ಅನುಭವಿಸುವ ಸಂಕಷ್ಟವೂ ತಪ್ಪುತ್ತದೆ. ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೂ ಕಾರಣವಾಗುತ್ತದೆ ಎಂದ ಅವರು ಯಕ್ಷಗಾನ ಅಕಾಡೆಮಿ ಈ ನಿಟ್ಟಿನಲ್ಲಿ ಮಕ್ಕಳ ಹಾಗೂ ಮಹಿಳೆಯರ ಯಕ್ಷಗಾನ ತರಬೇತಿ, ಪ್ರದರ್ಶನಕ್ಕೆ ಹಚ್ಚಿನ ಮಹತ್ವ, ಪ್ರೋತ್ಸಾಹ ನೀಡುತ್ತಿದೆ ಎಂದರು.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಂಬoಧಗಳು ಸಡಿಲಗೊಳ್ಳುತ್ತಿವೆ. ಮಕ್ಕಳು, ಹಿರಿಯರ ಜೊತೆಗೆ ಮಾತನಾಡಲು, ಬೆರೆಯಲು ಸಮಯವೇ ಇಲ್ಲ ಎಂಬoತಾಗಿದೆ. ಹೀಗಾಗಿ ಯಕ್ಷಗಾನದಂತಹ ಕಲೆಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಿದರೆ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಉತ್ತಮ ಮಾರ್ಗವನ್ನು ತೋರಿಸಿದಂತಾಗುತ್ತದೆ. ಇಂದಿನ ಶಿಕ್ಷಣದ ಜೊತೆಗೆ ಯಕ್ಷಗಾನವನ್ನು ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೂ ಪೂರಕವಾಗುತ್ತಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ತಂದೆತಾಯಿ ಯಾವುದೇ ಅಳುಕಿಲ್ಲದೆ ಮಕ್ಕಳಿಗೆ ಯಕ್ಷಗಾನದಂತಹ ಕಲೆಗಳನ್ನು ಕಲಿಯಲು ಪ್ರೋತ್ಸಾಹ ನೀಡಬೇಕು ಎಂದರು.

 

ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ್ ಗುಂಡ್ಮಿ ಮಾತನಾಡಿ, ಯಾವುದೇ ಕಲಾ ಪ್ರಕಾರಗಳು ಮಕ್ಕಳಿಗೆ ತಲುಪಬೇಕು. ಯಕ್ಷಗಾನ ಪ್ರದರ್ಶನವಿದ್ದಾಗ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅವರಲ್ಲಿ ಕಲಿಕೆಯ ಆಸಕ್ತಿ ಬೆಳೆಸಬೇಕು. ಇಲ್ಲವಾದರೆ ಮಕ್ಕಳು ನಮ್ಮ ಕಲೆ ಸಂಸ್ಕೃತಿಯಿoದ ವಿಮುಖರಾಗುವ ಸಂಭವವಿದೆ ಎಂದರು.

 

ಈ ಸಂದರ್ಭದಲ್ಲಿ ಭಾಗವತ ಗಣೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕಲಾ ನಿರ್ದೇಶಕ ಕೆ. ನರಸಿಂಹ ತುಂಗ ಸ್ವಾಗತಿಸಿದರು.

 

ಈ ಸಂದರ್ಭದಲ್ಲಿ ಮಹಿಳೆಯರಿಂದ ಪ್ರದರ್ಶನಗೊಂಡ ` ಶೂರ್ಪನಖಾ ಮಾನ ಭಂಗ ‘ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಬಿಲ್ಲಾಡಿ ಗಣೇಶ್ ಆಚಾರ್ಯ, ಗಣೇಶ ಶೆಣೈ, ವಾಗ್ವಿಲಾಸ ಭಟ್ಟ ಹಾಗೂ ಮುಮ್ಮೇಳದಲ್ಲಿ ವೃಂದಾ, ಅನುಷಾ, ಮಾನ್ಯ, ನಮನ, ಜಾಹ್ನವಿ, ಸುಜಾತಾ, ಮೇಧಾ, ಧನುಶ್ರೀ, ಇಂಚರ, ಆರಭಿ, ಈಶಾನಿ, ತನಿಷಾ ಪ್ರದರ್ಶನ ನೀಡಿದರು.