Home Crime ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ : ನನ್ನ ವಿರುದ್ಧ ಕೇಳಿಬರುತ್ತಿರುವ ಹನಿ ಟ್ರ್ಯಾಪ್ ಆರೋಪ...

ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ : ನನ್ನ ವಿರುದ್ಧ ಕೇಳಿಬರುತ್ತಿರುವ ಹನಿ ಟ್ರ್ಯಾಪ್ ಆರೋಪ ಸಂಪೂರ್ಣ ಸುಳ್ಳು : ಪತ್ನಿ ಸೌಮ್ಯ ಶೆಟ್ಟಿ…!!

ಉಡುಪಿ : ನೆಲ್ಯಾಡಿ ಮೂಲದ ಉದ್ಯಮಿ ಸುದೀಪ್ ರೈ ಅವರ ಆತ್ಮಹತ್ಯೆ ಪ್ರಕರಣವು ಉಡುಪಿ ಜಿಲ್ಲೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇದಿನೇ ಹೊಸ ಬೆಳವಣಿಗೆಗಳು ಬೆಳಕಿಗೆ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಸುದೀಪ್ ರೈ ಅವರ ಪತ್ನಿ ಸೌಮ್ಯ ಶೆಟ್ಟಿ ಅವರು ಮಾಧ್ಯಮಗಳ ಮುಂದೆ ಹಾಜರಾಗಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಸುದೀಪ್ ರೈ ಅವರ ಸಾವಿನ ನಂತರ ಅವರ ತಂದೆ ಕೆಲ ಗಂಭೀರ ಆರೋಪಗಳನ್ನು ಮಾಡಿರುವುದಾಗಿ ತಿಳಿದುಬಂದಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಸೌಮ್ಯ ಶೆಟ್ಟಿ ಅವರು, “ನನ್ನ ವಿರುದ್ಧ ಕೇಳಿಬರುತ್ತಿರುವ ಹನಿ ಟ್ರ್ಯಾಪ್ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ನಿರಾಧಾರ. ಇವು ನನ್ನ ವ್ಯಕ್ತಿತ್ವ ಹಾನಿ ಮಾಡಲು ಉದ್ದೇಶಿತವಾಗಿ ಮಾಡಲಾಗುತ್ತಿದೆ” ಎಂದು ಖಂಡಿಸಿದ್ದಾರೆ.

“ಸುದೀಪ್ ಅವರು ತಮ್ಮ ತಂದೆಯ ಮನೆಗೆ ತೆರಳಿದ್ದ ಸಮಯದಲ್ಲೇ ಈ ದುರ್ಘಟನೆ ಸಂಭವಿಸಿದೆ. ಈ ವಿಚಾರದಲ್ಲಿ ನನ್ನನ್ನು ಸಂಬಂಧಿಸುವುದು ನ್ಯಾಯಸಮ್ಮತವಲ್ಲ. ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.

ಇದೇ ವೇಳೆ, ಪ್ರಕರಣದಲ್ಲಿ ಉಲ್ಲೇಖವಾಗುತ್ತಿರುವ ವೇಣುಗೋಪಾಲ್ ಶೆಟ್ಟಿ ಕುರಿತು ಮಾತನಾಡಿದ ಸೌಮ್ಯ ಶೆಟ್ಟಿ ಅವರು, “ವೇಣುಗೋಪಾಲ್ ಶೆಟ್ಟಿ ಅವರು ನನ್ನ ವಿರುದ್ಧ ಪೂರ್ವಗ್ರಹದಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಜೊತೆ ಮದುವೆಯಾಗುವ ವಿಚಾರವನ್ನು ನಾನು ನಿರಾಕರಿಸಿದ್ದೆ. ಕಾರಣ, ಅವರು ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವಿಚಾರ ನನಗೆ ತಿಳಿದುಬಂದಿತ್ತು” ಎಂದು ಹೇಳಿದ್ದಾರೆ.

“ಈ ಹಿನ್ನೆಲೆಯಲ್ಲೇ ಅವರು ವೈಯಕ್ತಿಕ ದ್ವೇಷದಿಂದ ಈ ಪ್ರಕರಣವನ್ನು ಬಳಸಿಕೊಂಡು ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ನನ್ನ ಹೆಸರನ್ನು ಕೆಡಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿರುವುದಾಗಿ ಸೌಮ್ಯ ಶೆಟ್ಟಿ ತಿಳಿಸಿದ್ದಾರೆ. ಜೊತೆಗೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಸಂಪೂರ್ಣ ವಿಷಯವನ್ನು ವಿವರಿಸಿ, ನ್ಯಾಯಯುತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

“ನನ್ನ ಮೇಲೆ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು. ನನಗೆ ನ್ಯಾಯ ದೊರಕಬೇಕು” ಎಂದು ಸೌಮ್ಯ ಶೆಟ್ಟಿ ಆಗ್ರಹಿಸಿದ್ದಾರೆ.