ಗಂಗೊಳ್ಳಿ : ಮಂಗಳವಾರ ಸಂಭವಿಸಿದ ದೋಣಿ ದುರಂತದ ಸ್ಥಳಕ್ಕೆ ಬುಧವಾರ ಬೆಳಗ್ಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯ ಮೀನುಗಾರರೊಂದಿಗೆ ಶಾಸಕರು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಂಗೊಳ್ಳಿಯಲ್ಲಿ ನಡೆದ ದುರಂತದಲ್ಲಿ ಲೋಹಿತ್ ಅವರ ಮೃತದೇಹ ಬೆಳಗ್ಗೆ ಸಿಕ್ಕಿದೆ. ಇನ್ನಿಬ್ಬರ ಬಗ್ಗೆ ಸುಳಿವಿಲ್ಲ. ದುಡಿದು ಬದುಕುವವರ ಬಾಳಲ್ಲಿ ಆಘಾತ ಉಂಟಾಗಿದೆ. ಹೊಟ್ಟೆಪಾಡಿಗಾಗಿ ತೆರಳಿದ್ದರು. ಮೀನುಗಾರರು ದಯವಿಟ್ಟು ಬೋಟು, ದೋಣಿ ಹತ್ತುವಾಗ ಲೈಫ್ ಜಾಕೆಟ್ ಹಾಕಿಕೊಂಡು ಕಡಲಿಗೆ ಇಳಿಯಬೇಕು. ಜೀವ ರಕ್ಷಕ ಸಾಧನವಾಗಿದೆ. ಮೀನುಗಾರರು ಕನಿಷ್ಠ ಅಳಿವೆ ಬಾಗಿಲಿಗೆ ಬರುವಾಗ ಹಾಗೂ ಹೋಗುವಾಗ ಆದರೂ ಲೈಫ್ ಜಾಕೆಟ್ ಹಾಕಿಕೊಳ್ಳಬೇಕು ಎಂದವರು ಮನವಿ ಮಾಡಿಕೊಂಡರು.
ಕೋಸ್ಟಲ್ ಗಾರ್ಡ್‌ನವರು 5 ಕಿ.ಮೀ. ವ್ಯಾಪ್ತಿಯ ದೂರವನ್ನು ತೋರಿಸುವ ಡ್ರೋಣ್ ಕ್ಯಾಮೆರಾ ಬಳಸಿ, ನಾಪತ್ತೆಯಾದ ಮೀನುಗಾರರ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಎಲ್ಲ ಕಡೆಗೆ ಹುಡುಕಾಟ ನಡೆಸುತ್ತಿದ್ದಾರೆ. ಶೌರ್ಯ ತಂಡದವರು, ಕೋಸ್ಟಲ್ ಗಾರ್ಡ್, ಕರಾವಳಿ ಕಾವಲು ಪಡೆಯವರು, ಪೊಲೀಸರು, ಮುಳುಗು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್ ಕೆ ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯ್ಕ್ ಮುಖಂಡರು, ಮೀನುಗಾರ ಪ್ರಮುಖರು, ಉಪಸ್ಥಿತರಿದ್ದರು.