Home Karavali Karnataka ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಹೈಕೋರ್ಟ್…!!

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಹೈಕೋರ್ಟ್…!!

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕಗೊಂಡಿರುವ ವ್ಯವಸ್ಥಾಪನಾ ಸಮಿತಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅರ್ಜಿದಾರರು ತಡೆಯಾಜ್ಞೆ ಕೇಳುವಾಗ ಸರಕಾರವನ್ನು ಮಾತ್ರ ಪ್ರತಿವಾದಿಯನ್ನಾಗಿ ಮಾಡಿದ್ದರು. ಈ ಕೇಸಿನಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾದ ತನ್ನನ್ನು ಕೂಡ ಪ್ರತಿವಾದಿಯನ್ನಾಗಿ ಮಾಡಬೇಕೆಂದು ಹರೀಶ್ ಇಂಜಾಡಿ ಯವರು ಹೈಕೋರ್ಟನ್ನು ಕೇಳಿಕೊಂಡಿದ್ದರು. ಈ ಎಲ್ಲದರ ಬಗ್ಗೆ ಇಂದು ಜು.15 ರಂದು ಹೈಕೋರ್ಟಲ್ಲಿ ವಿಚಾರಣೆ ನಡೆಯಿತು.

ಅರ್ಜಿದಾರರ ಪರವಾಗಿ ನ್ಯಾಯವಾದಿ ವಿವೇಕ್ ರೆಡ್ಡಿಯವರು ವಾದ ಮಂಡಿಸಿದರೆ, ಸರಕಾರದ ಪರವಾಗಿ ಹೆಚ್ಚುವರಿ ಅಡ್ವಕೇಟ್ ಜನರಲ್ ದೇವದಾಸ್, ಹರೀಶ್ ಇಂಜಾಡಿಯವರ ಪರವಾಗಿ ಹಿರಿಯ ಕೌನ್ಸೆಲ್ ರವಿಶಂಕ‌ರ್ ಹಾಗೂ ನ್ಯಾಯವಾದಿ ಕರುಣಾಕರ ಗೌಡರು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವ್ಯವಸ್ಥಾಪನಾ ಸಮಿತಿ ನೇಮಕದ ವಿಧಾನ ಕಾನೂನು ಪ್ರಕಾರವೇ ಇರುವ ಕಾರಣ ತಡೆಯಾಜ್ಞೆ ನೀಡಲು ನಿರಾಕರಿಸಿದರು. ಹರೀಶ್ ಇಂಜಾಡಿಯವರನ್ನು ಪ್ರತಿವಾದಿಯಾಗಿ ಮಾಡಲು ಒಪ್ಪಿದ ನ್ಯಾಯಮೂರ್ತಿಯವರು, ಎಲ್ಲ ಒಂಬತ್ತು ಮಂದಿ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನೂ ಪ್ರತಿವಾದಿಗಳನ್ನಾಗಿ ಮಾಡಿ ನೋಟೀಸು ಜಾರಿ ಮಾಡಲು ನಿರ್ದೇಶಿಸಿದರೆಂದು ತಿಳಿದುಬಂದಿದೆ.