ಉಡುಪಿ: ಆತ್ರಾಡಿ – ಬಜ್ಪೆ ರಾಜ್ಯ ಹೆದ್ದಾರಿಯಲ್ಲಿ ಪಟ್ಲ ಬಯಲಿನಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಂಚರಿಸಲು ರಸ್ತೆ ಇಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.
ಕಳೆದ ಒಂದು ವರ್ಷದಿಂದ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಅಲ್ಲದೆ, ನೂರು ಮೀಟರ್ ರಸ್ತೆ ರಿಪೇರಿ ಮತ್ತು ಬಯಲು ಪ್ರದೇಶದ ರಸ್ತೆಗೆ ಮಣ್ಣು ಹಾಕುವ ಕೆಲಸವೂ ಸಂಪೂರ್ಣವಾಗಿಲ್ಲ. ಆಮೆಗತಿಯಲ್ಲಿ ಸಾಗುತ್ತಿರುವ ಸೇತುವೆ ಕಾಮಗಾರಿಯಿಂದಾಗಿ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ತುಂಬಾ ಸಮಸ್ಯೆ ಆಗುತ್ತಿದೆ.
ಪಟ್ಲಕ್ಕೆ ಬರುವ ಬಸ್ಸುಗಳನ್ನು ಕೂಡ ಅರ್ಧಕಿಮೀ ದೂರದ ಗುಡ್ಡೆಯಲ್ಲಿ ತಿರುಗಿಸಲಾಗುತ್ತಿದೆ. ಮರ್ಣೆ, ಮೂಡುಬೆಳ್ಳೆ, ಹಿರೇಬೆಟ್ಟು, ಪೆರ್ಣಂಕಿಲ, ಅಲೆವೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ನೆನೆಗುದಿಗೆ ಬಿದ್ದಿರುವ ಕಾಮಗಾರಿಯಿಂದ ಜನರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ.
