ವಿಟ್ಲ: ಅಂಬರ್‌ಗ್ರೀಸ್ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ವಿಟ್ಲ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕರೋಪಾಡಿ ನಿವಾಸಿ ಕುಮುದಾಕ್ಷ (27) ಹಾಗೂ ವಿಟ್ಲ ಕಸಬಾ ನಿವಾಸಿ ಧನು ಕುಮಾರ್ (32) ಎಂದು ತಿಳಿದು ಬಂದಿದೆ.
ಅಂಬರ್‌ಗ್ರೀಸ್ ಅನ್ನು ಮಾರಾಟ ಮಾಡಲು ಸ್ಕೂಟರ್ ನಲ್ಲಿ ಸಾಗಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ವಿಟ್ಲ ಠಾಣೆಯ ಎಸೈ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ವಿಟ್ಲ ಕಸಬಾ ಗ್ರಾಮದ ಬೋಳಂತಿಮೊಗರು ಎಂಬಲ್ಲಿಗೆ ತೆರಳಿ, ಸ್ಕೂಟರ್ ತಡೆದು ನಿಲ್ಲಿಸಿ ವಿಚಾರಿಸಿದ್ದು, ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5.73 ಗ್ರಾಂ ತೂಕದ ವಸ್ತುವನ್ನು ಹಾಜರುಪಡಿಸಿ, ಇದು ಅಂಬರ್‌ಗ್ರೀಸ್ ಎಂಬುದಾಗಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಬಳಿಯಿದ್ದ 2 ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




