ಮಲ್ಪೆ: ಅಕ್ರಮವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಆಹಾರ ಇಲಾಖೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ 21 ವಾಣಿಜ್ಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಹಾರ ಶಿರಸ್ತೇದಾರ್ ಆಶಾ ಕೆ. ಅವರಿಗೆ ಸನತ್ ಕಾಮತ್ ಅವರು ಅಕ್ರಮವಾಗಿ ಅನಿಲ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆ, ಆಹಾರ ನಿರೀಕ್ಷಕ ಹಿತೇಶ್ ಯು.ಬಿ. ಅವರೊಂದಿಗೆ ಜೂನ್ 3ರಂದು ಮಲ್ಪೆ ಜಂಕ್ಷನ್ ಸಮೀಪದ ಸನತ್ ಕಾಮತ್ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಪರಿಶೀಲನೆ ವೇಳೆ 19 ಕೆ.ಜಿ. ಸಾಮರ್ಥ್ಯದ ಅನಿಲ ತುಂಬಿದ ಒಂದು ಸಿಲಿಂಡರ್ ಸೇರಿದಂತೆ ಒಟ್ಟು 12 ವಾಣಿಜ್ಯ ಸಿಲಿಂಡರ್‌ಗಳು ಹಾಗೂ 5 ಕೆ.ಜಿ. ಸಾಮರ್ಥ್ಯದ 9 ವಾಣಿಜ್ಯ ಸಿಲಿಂಡರ್‌ಗಳು ಪತ್ತೆಯಾಗಿವೆ.
ವಿಚಾರಣೆ ವೇಳೆ ಸನತ್ ಕಾಮತ್ ಅವರು ಈ ಸಿಲಿಂಡರ್‌ಗಳನ್ನು ಮೀನುಗಾರಿಕಾ ಉದ್ದೇಶಕ್ಕಾಗಿ ಬಳಸುವವರಿಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ತಿಳಿಸಿದ್ದು, ಇದಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಅಥವಾ ದಾಖಲೆಗಳನ್ನು ಹೊಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 19 ಕೆ.ಜಿ.ಯ 12 ಹಾಗೂ 5 ಕೆ.ಜಿ.ಯ 9 ವಾಣಿಜ್ಯ ಸಿಲಿಂಡರ್‌ಗಳನ್ನು ಮಹಜರು ಮೂಲಕ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಲ್ಪೆ ಠಾಣೆಯ ಎಸ್ ಐ ಅನಿಲ್ ಅವರು ತನಿಖೆ ನಡೆಸುತ್ತಿದ್ದಾರೆ.





