ಉಡುಪಿ : ಓರ್ವ ವ್ಯಕ್ತಿಯ ಜೀವನದಲ್ಲಿ ಎಪ್ಪತ್ತೈದರ ಹರೆಯ ಅತ್ಯಂತ ವಿಶೇಷವಾದದ್ದು. ಪ್ರಾಯವಾಗಬೇಕಾದರೆ ಏನೂ ಸಾಧನೆ ಮಾಡಬೇಕಿಲ್ಲ. ಪ್ರಾಯವಾಗುವುದು ಸಾಧನೆಯೂ ಅಲ್ಲ. ಆದರೆ, ಇಷ್ಟು ವರ್ಷದ ಜೀವನದಲ್ಲಿ ಹೇಗೆ ಬದುಕಿದ್ದಾರೆ ಎಂಬುದೇ ಸಾಧನೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಡಾ. ತಲ್ಲೂರು ಶಿವರಾಮ ಶೆಟ್ಟಿಯವರದ್ದು ಸಾರ್ಥಕ ಎಪ್ಪತ್ತೈದು ವರ್ಷಗಳು. ಹತ್ತಾರು ಸಂಸ್ಥೆಗಳೊಂದಿಗೆ ಸಕ್ರಿಯರಾಗಿದ್ದುಕೊಂಡು ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಅವರ ಬದುಕಿನಲ್ಲಿದು ಅಮೃತ ಮಹೋತ್ಸವ.
ಶಿವ ಮತ್ತು ರಾಮ ಎಂಬ ದೇವರ ನಾಮಗಳಿಂದಲೇ ಪ್ರಸಿದ್ಧರಾಗಿ, ಬದುಕಿನಲ್ಲಿ ಸಮನ್ವಯ ತತ್ತ್ವವನ್ನು ಅನುಸರಿಸುತ್ತಿರುವ ಮಾನವತಾವಾದಿ ಡಾ. ತಲ್ಲೂರು ಶಿವರಾಮ ಶೆಟ್ಟರು ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ಅಕ್ಟೋಬರ್ 9, 1950 ರಂದು ಜನಿಸಿದರು. ಅಧ್ಯಾಪಕರಾಗಿದ್ದ ಅಣ್ಣಯ್ಯ ಶೆಟ್ಟಿ ಮತ್ತು ಕನಕಾ ಶೆಟ್ಟಿ ಯವರ ದ್ವಿತೀಯ ಪುತ್ರರಾಗಿ ಉನ್ನತ ಸಂಸ್ಕಾರದೊಂದಿಗೆ ಜೀವನವನ್ನು ರೂಪಿಸಿಕೊಂಡರು. ಉಡುಪಿಯಲ್ಲಿ ನೆಲೆಯನ್ನು ಕಂಡುಕೊಂಡರೂ ‘ತಲ್ಲೂರು’ ಊರನ್ನು ತಮ್ಮ ಹೆಸರಿನೊಂದಿಗೇ ಇರಿಸಿಕೊಂಡಿದ್ದಾರೆ. ಶಿವರಾಮ ಶೆಟ್ಟಿಯವರಿಂದಾಗಿ ತಲ್ಲೂರಿಗೆ ಕೀರ್ತಿ ಬಂದಂತಾಗಿದೆ. ಉಡುಪಿ ನಗರದಲ್ಲಿ ಬಾಲ್ಯ, ಯೌವನಗಳನ್ನು ಕಳೆಯುತ್ತಿರುವಾಗಲೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ಆರಂಭಿಸಿದ ಶಿವರಾಮ ಶೆಟ್ಟರು ಸಹಜವಾಗಿಯೇ ಮೇಧಾವಿಗಳು. ಹೊಟೇಲು ಉದ್ಯಮವೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ನಡೆಸಿ ‘ಯಶಸ್ವಿ ಉದ್ಯಮಿ’ ಎಂಬ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಸಾವಿರಾರು ಗ್ರಾಹಕರ ಮನಸ್ಸನ್ನು ಗೆದ್ದಿದ್ದಾರೆ. ಅವರ ಔದ್ಯಮಿಕ ಕ್ಷೇತ್ರದ ಸಾಧನೆಗೆ ಪುಟವಿಟ್ಟಂತೆ 2016ರಲ್ಲಿ ‘ಕರ್ನಾಟಕ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘ (ರಿ.) ಇದರ ವತಿಯಿಂದ ‘ಉದ್ಯಮರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲಯನ್ಸ್ ಕ್ಲಬ್ ಸೇವಾಸಂಸ್ಥೆಯೊಂದಿಗೆ ಆರಂಭದಿಂದಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಹಂತಹಂತವಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ‘ಲಯನ್ಸ್ ಗವರ್ನರ್’ ಆಗಿ ದೇಶ-ವಿದೇಶಗಳಲ್ಲಿ ಹೆಸರು ಪಡೆಯುವಂಥ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರು ಅಮೆರಿಕದ ಲಾಸ್ ವೇಗಾಸ್ನಲ್ಲಿ ‘ಇಂಟರ್ ನ್ಯಾಶನಲ್ ಪ್ರೆಸಿಡೆಂಟ್ ಅಪ್ರಿಸಿಯೇಶನ್ ಅವಾರ್ಡ್’ ಎಂಬ ವಿಶ್ವ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಟರ್ನ್ಯಾಶನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ವತಿಯಿಂದ ‘ಸ್ಮೈಲ್ ಫ್ಯೂಚರ್ ಅವಾರ್ಡ್’ ಪಡೆದಿದ್ದಾರೆ. ಲಯನ್ಸ್ ಸಂಸ್ಥೆಯಿಂದ ಗೌರವ ಪಡೆದಿರುವಂತೆಯೇ ಲಯನ್ಸ್ ಸಂಸ್ಥೆಯ ಗೌರವವನ್ನು ಹೆಚ್ಚಿಸುವ ಸಮಾಜಸೇವಾ ಕೆಲಸಗಳನ್ನು ಮಾಡಿದ್ದಾರೆ.
ಬಾಲ್ಯದಿಂದಲೂ ಯಕ್ಷಗಾನದ ಕುರಿತು ಆಸಕ್ತಿ ಹೊಂದಿರುವ ಡಾ. ತಲ್ಲೂರು ಶಿವರಾಮ ಶೆಟ್ಟರು ಮಹಾನ್ ಕಲಾವಿದರ ಪ್ರಸಿದ್ಧ ಯಕ್ಷಗಾನ ಕಲಾವಿದರ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬಂದರು. ಉಡುಪಿಯ ‘ಯಕ್ಷಗಾನ ಕಲಾರಂಗ’ ಸಂಸ್ಥೆಯ ಅಧ್ಯಕ್ಷರಾಗಿ 7 ವರ್ಷಕಾಲ ಕಲಾರಂಗ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಉಡುಪಿ-ಇಂದ್ರಾಳಿ ಯಕ್ಷಗಾನ ಕೇಂದ್ರದ ಪೋಷಕನಾಗಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ತಾನು ಯಕ್ಷಗಾನ ಕಲಾವಿದನಾಗಬೇಕೆಂಬ ಹಂಬಲದಲ್ಲಿ ಅರುವತ್ತನೆಯ ವಯಸ್ಸಿನಲ್ಲಿ ಯಕ್ಷಗಾನವನ್ನು ಕಲಿತು ನಾಟ್ಯಾಭಿನಯ, ಮಾತುಗಾರಿಕೆಯಲ್ಲಿ ಪ್ರಾವೀಣ್ಯವನ್ನು ಸಾಧಿಸಿ ಸುಮಾರು ನಾಲ್ನೂರಕ್ಕಿoತಲೂ ಅಧಿಕ ಪಾತ್ರ ಮಾಡಿ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಘನ ಕರ್ನಾಟಕ ಸರ್ಕಾರದ ‘ಕರ್ನಾಟಕ ಯಕ್ಷಗಾನ ಅಕಾಡೆಮಿ’ಯ ಅಧ್ಯಕ್ಷರಾಗಿ ನಾಡು ಮೆಚ್ಚುವಂಥ ಕಲಾಸೇವೆಯನ್ನು ಮಾಡುತ್ತಿದ್ದಾರೆ.
ಉಡುಪಿಯ ಪ್ರತಿಷ್ಠಿತ ‘ರಂಗಭೂಮಿ’ (ರಿ.) ಸಂಸ್ಥೆಯ ಅಧ್ಯಕ್ಷರಾಗಿ ಹದಿನೈದು ವರ್ಷಗಳಿಂದ ಅದನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕರ್ನಾಟಕ ಜಾನಪದ ಪರಿಷತ್ (ರಿ.) ಇದರ ಅಧ್ಯಕ್ಷರಾಗಿ ರಾಜ್ಯದಾದ್ಯಂತ ಜಾನಪದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ನೂರಾರು ಮಂದಿ ಜಾನಪದ ಕಲಾವಿದರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ ಸಲ್ಲಿಸಿರುವ ಡಾ. ತಲ್ಲೂರು ಸುಮಾರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಕಳೆದುಹೋಗದೆ ತಮ್ಮ ಹಿರಿಯರ ಈ ಮಣ್ಣಿನ ಉದಾತ್ತ ಶ್ರೀಮಂತ ಪರಂಪರೆಯನ್ನು ಮನಗಾಣಬೇಕೆಂಬ ಉದ್ದೇಶದಿಂದ ನೈತಿಕ ಶಿಕ್ಷಣ ಸಾರವನ್ನು ಒಳಗೊಂಡ ನೀತಿಪಾಠ ಹಾಗೂ ಸಾಮಾಜಿಕ ಮೌಲ್ಯ ಭಿತ್ತರಿಸುವ ದಾರಿದೀಪ, ಬಾಳಬೆಳಕು, ಹೊಂಬೆಳಕು, ಮುಂಬೆಳಕು, ಪಾಥೇಯ, ಹೊಂಗಿರಣ, ಪಥದೀಪಿಕಾ, ಪರಂಪರಾಗತ, ಬರಹತರಹ, ಧರ್ಮಂಚರ, ಕಾಲಾಸಂಚಯ ನಿತ್ಯ ಸತ್ಯ ಮೊದಲಾದ ಉದ್ಭೋಧಕ ಲೇಖನ ಗ್ರಂಥಗಳನ್ನು ಸ್ವತ: ರಚಿಸಿ ಪ್ರಕಟಿಸಿರುತ್ತಾರೆ. ಈ ಎಲ್ಲಾ ಕೃತಿಗಳು ಶಾಲಾವಿದ್ಯಾರ್ಥಿಗಳಿಂದ ತೊಡಗಿ ಹಿರಿಯರವರೆಗೆ ಪ್ರಶಂಸೆಗೆ ಪಾತ್ರವಾಗಿವೆ. ‘ಕಲಾಸಂಚಯ’ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2020ನೆಯ ಸಾಲಿನ ಪುಸ್ತಕ ಬಹುಮಾನವನ್ನು ಪಡೆದಿದ್ದಾರೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಬೆಂಗಳೂರು ವತಿಯಿಂದ ‘ಪುಸ್ತಕ ಸೊಗಡು’ ಗೌರವ ಪ್ರಧಾನವಾಗಿರುತ್ತದೆ. ಶ್ರೀಯುತರು ಸಾಹಿತ್ಯಾದಿ ಹಲವು ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗಾಗಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನಿಂದ ಕೈರಳಿ ಶ್ರೀ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಹೀಗೆ ಹಲವು ಪ್ರಶಸ್ತಿಗಳ ಗರಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ನ ಮೂಲಕ ಸಮಾಜಸೇವಾ ಕೆಲಸಗಳನ್ನು ಮಾಡುತ್ತಿದ್ದಾರೆ. ಪೂಜ್ಯ ಮಾತಾಪಿತರ ಸ್ಮೃತಿಯಲ್ಲಿ ‘ಯಕ್ಷಗಾನ ವಿದ್ವಾಂಸ ಪ್ರಶಸ್ತಿ’ಯನ್ನು ನೀಡುತ್ತ ಬಂದಿದ್ದಾರೆ. ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿಯನ್ನು ಸ್ಥಾಪಿಸಿ ಅದನ್ನು ಗಣ್ಯಮಾನ್ಯರಿಗೆ ನೀಡುತ್ತ ಬಂದಿದ್ದಾರೆ. ಕರ್ನಾಟಕ ಜಾನಪದ ಪರಿಷತ್ (ರಿ.) ಉಡುಪಿ ಜಿಲ್ಲಾಧ್ಯಕ್ಷ ಸಾರಥ್ಯವನ್ನು ವಹಿಸಿಕೊಂಡು ಅರ್ಹ ಜಾನಪದ ಕಲಾವಿದರು, ಕಲಾ ಸಂಘಟಕರು, ಕಲಾ ಪ್ರೋತ್ಸಾಹಕರನ್ನು ಗುರುತಿಸಿ ಜಾನಪದ ಪ್ರಶಸ್ತಿಯನ್ನು ಪ್ರಧಾನ ಮಾಡುವ ಜೊತೆಗೆ ಜಾನಪದ ಸೊಗಡನ್ನು ಪ್ರದರ್ಶಿಸುವ ಕಾರ್ಯವನ್ನು ನಡೆಸಿರುತ್ತಾರೆ.
ಅಗಣಿತ ಪ್ರಶಸ್ತಿಗಳಿಂದ ಸಂಮಾನಿತರಾದ ಶಿವರಾಮ ಶೆಟ್ಟರು ಸಾಧನೆಯ ಕಿರೀಟವೆಂಬಂತೆ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವತಿಯಿಂದ 2022 ನೆಯ ಗೌರವ ಡಾಕ್ಟರೇಟ್ ಪದವಿಯ ಗೌರವ ಪಡೆದಿದ್ದಾರೆ. ಹಾಗೂ 2018 ನೇ ಸಾಲಿನ ಪುಣೆಯ ಅಕಾಡೆಮಿಕ್ ಕೌನ್ಸಿಲ್ ಆಪ್ ಇಂಡಿಯನ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ವತಿಯಿಂದ ‘ಗೌರವ ಡಾಕ್ಟರೇಟ್’ ಪದವಿ ಪಡೆದಿದ್ದಾರೆ. ಎರಡು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಅಪೂರ್ವ ಸಾಧಕರಾದ ಶಿವರಾಮ ಶೆಟ್ಟರಿಗೆ ಈ ಗೌರವಗಳು ಆರ್ಹವಾಗಿಯೇ ಸಂದಿವೆ. ಜೊತೆಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯಿಂದ ಮಾನಿತರಾಗಿರುವುದು ವಿಶೇಷ. ಪರ್ಯಾಯ ಪಲಿಮಾರು ಮಠದಿಂದ ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ಸಮಾಜ ಸೇವಾ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಸಮಾಜ ಸೇವಾದಳದ ವತಿಯಿಂದ ಡಾ. ಶಿವಕುಮಾರ ಸ್ವಾಮೀಜಿಯವರ ಸ್ಮರಣಾರ್ಥ ‘ಸಿದ್ಧಗಂಗಾ ಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ’ಯಿಂದ ಮಾನಿತರಾಗಿದ್ದಾರೆ.
ಶಿವರಾಮ ಶೆಟ್ಟರು ಪತ್ನಿ ಗಿರಿಜಾ ಶಿವರಾಮ ಶೆಟ್ಟಿ ಮತ್ತು ನಾಲ್ವರು ಮಕ್ಕಳೊಂದಿಗೆ ಧನ್ಯ ಗೃಹಸ್ಥಾಶ್ರಮಿ. ತಲ್ಲೂರು ಶಿವರಾಮ ಶೆಟ್ಟರು ಕಟ್ಟಿಬೆಳೆಸಿದ, ಮುನ್ನಡೆಸಿದ ಹಲವು ಸಂಸ್ಥೆಗಳು ಈಗ ಸಮಾಜದಲ್ಲಿ ಸಾರ್ಥಕ ಸೇವೆಯನ್ನು ಮಾಡುತ್ತಿವೆ. ಅವರಿಂದ ಉಪಕೃತರಾದ ಎಷ್ಟೋ ಮಂದಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಹಾಗಾಗಿ, ಅವರ ಎಪ್ಪತ್ತೈದನೆಯ ಜನ್ಮದಿನ ಅವರೊಬ್ಬರದೇ ಸಂಭ್ರಮವಲ್ಲ, ಹತ್ತಾರು ಸಂಸ್ಥೆಗಳ, ನೂರಾರು ವ್ಯಕ್ತಿಗಳ ಸಡಗರದ ಸಂಭ್ರಮವೂ ಹೌದು. ಎಪ್ಪತ್ತೈದರ ತಲ್ಲೂರು ಶಿವರಾಮ ಶೆಟ್ಟರನ್ನು ‘ಶತಮಾನಂ ಭವತಿ’ ಎಂದು ಹಾರೈಸುವ ಸಂದರ್ಭವೂ ಹೌದು.

