Home Crime ಮಂಗಳೂರು: ಮಾರಕಾಸ್ತ್ರಗಳಿಂದ ರೌಡಿಶೀಟರ್ ‘ಟಾಬ್ಲೆಟ್ ಆರಿಫ್’ ಬರ್ಬರ ಕೊಲೆ…!!

ಮಂಗಳೂರು: ಮಾರಕಾಸ್ತ್ರಗಳಿಂದ ರೌಡಿಶೀಟರ್ ‘ಟಾಬ್ಲೆಟ್ ಆರಿಫ್’ ಬರ್ಬರ ಕೊಲೆ…!!

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಒಬ್ಬರನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ತಲಪಾಡಿ ನಿವಾಸಿ, ‘ಟಾಬ್ಲೆಟ್ ಆರಿಫ್’ ಎಂದೇ ಪರಿಚಿತನಾಗಿದ್ದ ಆರಿಫ್ (46) ಎಂದು ಗುರುತಿಸಲಾಗಿದೆ.ಬೆಳಗಿನ ಜಾವ ಆರಿಫ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರೊಂದು ಉದ್ದೇಶಪೂರ್ವಕವಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ಆರಿಫ್ ರಸ್ತೆಗೆ ಬಿದ್ದ ತಕ್ಷಣ ಕಾರಿನಿಂದ ಇಳಿದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕ್ರೂರವಾಗಿ ದಾಳಿ ನಡೆಸಿದ್ದು, ತೀವ್ರ ಗಾಯಗಳಿಂದ ಆರಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಅದೇ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.ಮೃತ ಆರಿಫ್ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿ ದಾಖಲಾಗಿದ್ದಾನೆ ಎಂದು ತಿಳಿದುಬಂದಿದೆ. ಈತನ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ. ಹಳೆಯ ವೈಷಮ್ಯ, ಗ್ಯಾಂಗ್ ವಾರ್ ಅಥವಾ ವೈಯಕ್ತಿಕ ಕಾರಣಗಳಿಂದ ಈ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.ಬೆಳ್ಳಂಬೆಳಗ್ಗೆ ಜನಸಂಚಾರ ಇರುವ ರಸ್ತೆಯಲ್ಲೇ ನಡೆದ ಈ ಕ್ರೂರ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.