ರಾಯಚೂರು: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಪಾಲಿಗೆ ವಿಧಿಯು ಅಪಘಾತದ ರೂಪದಲ್ಲಿ ಬಂದೆರಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಚಿಲಕನಡೋಣ ಬಳಿ ಗುರುವಾರ ಮುಂಜಾನೆ ಬುಲೆರೋ ವಾಹನ ಹಾಗೂ ಸಿಮೆಂಟ್ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಹಾಸನ ಮತ್ತು ಚಿಕ್ಕಮಗಳೂರು ಮೂಲದವರಾಗಿ ಗುರುತಿಸಲಾಗಿದ್ದು, ಅಮೃತ, ತೇಜಶ್ವಿನಿ, ಧನ್ಯ, ದೀಪಿಕ, ದೀಕ್ಷಿತ್, ಪ್ರತಾಪ್, ಕುಮಾರ್ ಹಾಗೂ ಯಶೋದಮ್ಮ ಮೃತಪಟ್ಟಿದ್ದಾರೆ. ಮೃತರಲ್ಲಿ ಮೂರು ವರ್ಷದ ಮಗು ಸೇರಿದಂತೆ ಐವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪಘಾತದ ತೀವ್ರತೆಗೆ ಬುಲೆರೋ ವಾಹನ ಸಂಪೂರ್ಣ ಜಜ್ಜಿಹೋಗಿದ್ದು, ಸ್ಥಳದಲ್ಲೇ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಕರ್ನೂಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಬೀದರ್‌ನಿಂದ ತುಮಕೂರಿನತ್ತ ಸಾಗುತ್ತಿದ್ದ ಸಿಮೆಂಟ್ ಟ್ಯಾಂಕರ್ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






