Home Crime ಪರವಾನಿಗೆ ಇಲ್ಲದೆ ಮರಳು ಸಾಗಾಟ : ಮಿನಿ ಟಿಪ್ಪರ್ ವಶ, ಚಾಲಕನ ವಿರುದ್ಧ ಪ್ರಕರಣ…!!

ಪರವಾನಿಗೆ ಇಲ್ಲದೆ ಮರಳು ಸಾಗಾಟ : ಮಿನಿ ಟಿಪ್ಪರ್ ವಶ, ಚಾಲಕನ ವಿರುದ್ಧ ಪ್ರಕರಣ…!!

ಕುಂದಾಪುರ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮಿನಿ ಟಿಪ್ಪರ್‌ನ್ನು ಕುಂದಾಪುರ ಪೊಲೀಸರು ವಶಪಡಿಸಿಕೊಂಡ ಘಟನೆ ಮೇ 27ರಂದು ಬೆಳಕಿಗೆ ಬಂದಿದೆ.

ದಿನಾಂಕ 27/05/2026ರಂದು ಮಧ್ಯಾಹ್ನ ಎಂ. ಕೋಡಿ ಜಂಕ್ಷನ್ ಬಳಿ ಚೆಕ್‌ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ,  ಮಿನಿ ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ (ತನಿಖೆ) ಪುಷ್ಪ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಹಳದಿ ಬಣ್ಣದ ಟಾಟಾ ಕಂಪನಿಯ KA-20-D-8849 ಮಿನಿ ಟಿಪ್ಪರ್ ವಾಹನದಲ್ಲಿ ಸುಮಾರು 1½ ಯುನಿಟ್ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ವಾಹನ ಚಾಲಕನನ್ನು ಜಪ್ತಿ ಗ್ರಾಮದ ಶಶಿಧರ ಕುಲಾಲ್ (27) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಸುಮಾರು ₹4 ಲಕ್ಷ ಮೌಲ್ಯದ ಮಿನಿ ಟಿಪ್ಪರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿತನು ವಾಹನ ಮಾಲಕನೊಂದಿಗೆ ಸೇರಿ ಎಲ್ಲಿಯೋ ಮರಳನ್ನು ಕಳವು ಮಾಡಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆ ಇಂತಹ ಪ್ರಕರಣಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ.