ನವದೆಹಲಿ : ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು, ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನಿಂದ ಪರೋಕ್ಷ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ (31) ಮಂಗಳವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಮೂಲಕ ದಶಕಕ್ಕೂ ಹೆಚ್ಚು ಕಾಲದ ಅವರ ಮೌನ ಹೋರಾಟ ಮತ್ತು ಕುಟುಂಬದ ಸುದೀರ್ಘ ಕಾನೂನು ಸಮರ ಅಂತ್ಯಗೊಂಡಿದೆ.
ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದ ಹರೀಶ್, 2013ರಲ್ಲಿ ಪಿಜಿಯ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ಅಂದಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಪೋಷಕರು ಗಾಜಿಯಾಬಾದ್‌ನ ಮನೆಯಲ್ಲಿ ಜೀವರಕ್ಷಕ ವ್ಯವಸ್ಥೆಯಡಿ ಸಲಹುತ್ತಿದ್ದರು. ಮಗನ ಈ ನರಕಸದೃಶ ಬದುಕನ್ನು ಕಂಡು ಮರುಗಿದ್ದ ಪೋಷಕರು, ‘ಗೌರವಯುತ ಸಾವಿಗೆ’ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಗಂಭೀರತೆ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಹರೀಶ್‌ಗೆ ನೀಡಲಾಗುತ್ತಿದ್ದ ಜೀವರಕ್ಷಕ ವ್ಯವಸ್ಥೆಯನ್ನು ಮಾನವೀಯವಾಗಿ ಹಿಂಪಡೆಯಲು ಏಮ್ಸ್‌ಗೆ ಸೂಚಿಸಿತ್ತು. ಮಾರ್ಚ್ 14ರಂದು ಏಮ್ಸ್‌ಗೆ ಸ್ಥಳಾಂತರಗೊಂಡಿದ್ದ ಹರೀಶ್, ನ್ಯಾಯಾಲಯದ ನಿರ್ದೇಶನದಂತೆ ಚಿಕಿತ್ಸೆ ಸ್ಥಗಿತಗೊಳಿಸಿದ ನಂತರ ಮಂಗಳವಾರ ನಿಧನರಾದರು. ಇದು ಭಾರತದಲ್ಲಿ ದಯಾಮರಣಕ್ಕೆ ಕಾನೂನಾತ್ಮಕ ಮಾನ್ಯತೆ ನೀಡಿದ ಮೊದಲ ಪ್ರಕರಣವಾಗಿ ಇತಿಹಾಸ ಸೇರಿದೆ.





