ಬೈಂದೂರು: ಮಹೋತೊಭಾರ ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಬುಧವಾರ ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ನಿತ್ಯ ಬಲಿ, ಶತರುದ್ರಾಭಿಷೇಕ, ರಥ ಬಲಿ, ಕ್ಷೇತ್ರಪಾಲ ಬಲಿ, ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಹಾಗೂ ರಥಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಂಜೆ ನಡೆದ ಮನ್ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದರು.
ಕಲಾವೈಭವಗಳಿಂದ ಕಂಗೊಳಿಸುತ್ತಿದ್ದ ದೇವಸ್ಥಾನ ಈ ಬಾರಿ ಇನ್ನಷ್ಟು ಅಲಂಕೃತಗೊಂಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಇಡೀ ನಗರವೇ ಹಬ್ಬದ ವಾತಾವರಣದಲ್ಲಿ ಮಿಂದೇಳಿತು. ವಾರ್ಷಿಕ ರಥೋತ್ಸವವು ಉತ್ಸವಕ್ಕೆ ವಿಶೇಷ ಕಳೆ ನೀಡಿತು.
ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳ ಬಳಿಕ ರಥೋತ್ಸವ ನಡೆಯುವ ಸಂಪ್ರದಾಯವಿದ್ದು, ಒಟ್ಟು ಏಳು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವಗಳು ಜರುಗಿದ ನಂತರ ರಥೋತ್ಸವ, ಅವಭ್ರಥೋತ್ಸವ ಹಾಗೂ ನಗರೋತ್ಸವ ನಡೆಯುತ್ತದೆ.

ನಗರೋತ್ಸವದಲ್ಲಿ ಜಾತಿ-ಮತ ಭೇದವಿಲ್ಲದೆ ಎಲ್ಲಾ ಧರ್ಮದ ಜನರು ಭಾಗವಹಿಸಿ ಸೌಹಾರ್ದತೆಯ ಸಂದೇಶ ಸಾರುತ್ತಾರೆ. ರಥೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದರೆ, ರಾತ್ರಿ ಓಕುಳಿ ಹೊಂಡದ ಆಟ ವಿಶೇಷ ಆಕರ್ಷಣೆಯಾಗಿತ್ತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು ಮಾತನಾಡಿ, ಈ ವರ್ಷದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದ್ದು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭದ್ರತಾ ದೃಷ್ಟಿಯಿಂದ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಸುನೀಲ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.





