Home Crime ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ : ಐದು ಮಂದಿ ಡ್ರಗ್‍ಪೆಡ್ಲರ್‌ಗಳು ಅರೆಸ್ಟ್…!!

ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ : ಐದು ಮಂದಿ ಡ್ರಗ್‍ಪೆಡ್ಲರ್‌ಗಳು ಅರೆಸ್ಟ್…!!

ಬೆಂಗಳೂರು : ನಗರದ ವಿವಿಧ ಕಡೆಗಳಲ್ಲಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಐದು ಮಂದಿ ಡ್ರಗ್‍ಪೆಡ್ಲರ್‌ ಗಳನ್ನು ಬಂಧಿಸಿ, ಒಟ್ಟು 11.04 ಕೋಟಿ ರೂ. ಮೌಲ್ಯದ ಗಾಂಜಾ, ಎಂಡಿಎಂಎ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ರಸ್ತೆಯ ನಾಯಂಡಹಳ್ಳಿ ಸಿಗ್ನಲ್ ಬಳಿ ಮಾದಕ ವಸ್ತು ಗಾಂಜಾ ಸಾಗಿಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ 3.32 ಕೋಟಿ ಮೌಲ್ಯದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ.

ಉಪ್ಪಾರಪೇಟೆ ಠಾಣೆ ಪೊಲೀಸರು ಆರ್.ಕೆ.ಪುರದ ಲಾಡ್ಜ್‍ವೊಂದರ ಮೇಲೆ ದಾಳಿ ಮಾಡಿ 7.60 ಕೋಟಿ ರೂ. ಮೌಲ್ಯದ 3 ಕೆ.ಜಿ. 900 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಹಾಗೆಯೇ, ಕಾಡುಗೋಡಿ ಠಾಣೆಯ ಪೊಲೀಸರು ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ 12 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಇವುಗಳ ಒಟ್ಟಾರೆ ಐಎನ್‍ಆರ್ ಮೌಲ್ಯ 5.77 ಕೋಟಿ ರೂ.ಗಳಾದರೆ, ಮಾರುಕಟ್ಟೆ ಮೌಲ್ಯ 11.04 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹೊರರಾಜ್ಯದ ವ್ಯಕ್ತಿ ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶಿ ಮೂಲದ ಅಪರಿಚಿತ ವ್ಯಕ್ತಿಯಿಂದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಎಂಡಿಎಂಎ ಮತ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.