Home Dskshina Kannada ಸುಮಂತ್ ಸಾವಿನ ಪ್ರಕರಣ : ಸಮಗ್ರ ತನಿಖೆಗೆ ಆಗ್ರಹಿಸಿ ಎಸ್‌ಪಿ ಭೇಟಿ ಮಾಡಿದ ಶಾಸಕ..!

ಸುಮಂತ್ ಸಾವಿನ ಪ್ರಕರಣ : ಸಮಗ್ರ ತನಿಖೆಗೆ ಆಗ್ರಹಿಸಿ ಎಸ್‌ಪಿ ಭೇಟಿ ಮಾಡಿದ ಶಾಸಕ..!

ಬೆಳ್ತಂಗಡಿ, ಜೂನ್ 4: ಓಡಿಲ್ನಾಳ ಗ್ರಾಮದ ಬಾಲಕ ಸುಮಂತ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ  ಮೃತ ಬಾಲಕನ ಪೋಷಕರು ಹಾಗೂ ಕುಟುಂಬ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು (ಎಸ್‌ಪಿ)  ಶಾಸಕ ಹರೀಶ್  ಪೂಂಜಾ ಭೇಟಿ ಮಾಡಿ ಚರ್ಚೆ ನಡೆಸಿದರು 

ಸುಮಾರು ಐದು ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣದ ಕುರಿತು ಈಗಾಗಲೇ ವಿಧಾನಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗಿದ್ದು, ರಾಜ್ಯ ಗೃಹಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಸೂಕ್ತ ತನಿಖೆ ನಡೆಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಇಷ್ಟೊಂದು ಸಮಯ ಕಳೆದರೂ ಕುಟುಂಬಕ್ಕೆ ನ್ಯಾಯ ದೊರಕದಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು 

ಎಸ್‌ಪಿ ಅವರೊಂದಿಗೆ ನಡೆದ ಸಭೆಯಲ್ಲಿ ಪ್ರಕರಣದ ತನಿಖೆಯ ಪ್ರಗತಿ, ಇದುವರೆಗಿನ ಬೆಳವಣಿಗೆಗಳು ಹಾಗೂ ಮುಂದಿನ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಯಾಮಗಳಲ್ಲೂ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ, ಸತ್ಯಾಂಶವನ್ನು ಹೊರತೆಗೆದು ಆದಷ್ಟು ಶೀಘ್ರ ನ್ಯಾಯ ಒದಗಿಸುವಂತೆ ಮನವಿ ಮಾಡಲಾಯಿತು 

ನಿರಪರಾಧಿ ಬಾಲಕನ ಸಾವಿನ ಪ್ರಕರಣದಲ್ಲಿ ಸತ್ಯ ಹೊರಬಂದು ಕುಟುಂಬಕ್ಕೆ ನ್ಯಾಯ ದೊರಕುವವರೆಗೆ ತಮ್ಮ ಹೋರಾಟ ಹಾಗೂ ಪ್ರಯತ್ನಗಳು ಕುಟುಂಬದೊಂದಿಗೆ ನಿರಂತರವಾಗಿ ಮುಂದುವರಿಯಲಿವೆ ಎಂದು ತಿಳಿಸಲಾಯಿತು.