Home Crime ಐವರು ಡ್ರಗ್ಸ್‌ ಪೆಡ್ಲರ್‌ಗಳ ಬಂಧನ : 5.20 ಲಕ್ಷ ರೂ. ಮೌಲ್ಯದ 5.759 ಕೆ.ಜಿ. ಗಾಂಜಾ...

ಐವರು ಡ್ರಗ್ಸ್‌ ಪೆಡ್ಲರ್‌ಗಳ ಬಂಧನ : 5.20 ಲಕ್ಷ ರೂ. ಮೌಲ್ಯದ 5.759 ಕೆ.ಜಿ. ಗಾಂಜಾ ವಶ…!!

ಮಂಗಳೂರು: ನಗರದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತರಿಸಲಾದ ಗಾಂಜಾವನ್ನು ಪಾಲು ಮಾಡುತ್ತಿದ್ದ ಐವರನ್ನು ನಗರದ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಸೆನ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬಿಕರ್ನಕಟ್ಟೆ ಅಡುಮರೋಳಿ ನಿವಾಸಿ ತುಷಾರ್‌ ಅಲಿಯಾಸ್‌ ಸೋನು (21), ನಾಗುರಿಯ ದ್ವನಿ ಶೆಟ್ಟಿ (20), ಜಲ್ಲಿಗುಡ್ಡೆಯ ಸಾಗರ್‌ ಕಕೇರಾ (19), ಶಕ್ತಿನಗರದ ವಿಕಾಸ್‌ ಥಾಪ ಅಲಿಯಾಸ್‌ ಪುಚ್ಚಿ (23) ಮತ್ತು ಅಳಕೆ ಕಂಡೆಟ್ಟುವಿನ ವಿಘ್ನೇಶ್‌ ಕಾಮತ್‌ (24)ಬಂಧಿತ ಆರೋಪಿಗಳು.

ಆರೋಪಿಗಳಿಂದ 5.20 ಲಕ್ಷ ರೂ. ಮೌಲ್ಯದ 5.759 ಕೆ.ಜಿ. ಗಾಂಜಾ, ಸುಮಾರು 2 ಲಕ್ಷ ರೂ. ಮೌಲ್ಯದ 6 ಮೊಬೈಲ್‌ ಫೋನ್‌, ಸುಮಾರು 70 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಮತ್ತು 500 ರೂ. ಮೌಲ್ಯದ ತೂಕ ಮಾಪನ ಯಂತ್ರ ಸೇರಿ ಸುಮಾರು 7,90,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್‌ಗಳಲ್ಲಿ ಪ್ಯಾಕ್‌ ಮಾಡಿ ಒಂದು ಪ್ಯಾಕೆಟ್‌ಗೆ 1 ಸಾವಿರ ರೂ.ನಂತೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.

ಧ್ರುವನ್‌ ಶೆಟ್ಟಿ ಸಕಲೇಶಪುರ ಮತ್ತು ಡಾ| ಪ್ರಜ್ವಲ್‌ ಪೀಣ್ಯಸ್‌ ಬೀದರ್‌ ಎಂಬವರು ಮೈಸೂರಿನಿಂದ ಈ ಗಾಂಜಾವನ್ನು ತಂದು ಕೊಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್‌ ಪೊಲೀಸರು ಜು. 2ರಂದು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಹಾಲಾಡಿಯ ಗಿಡಮರಗಳಿರುವ ನಿರ್ಜನ ಪ್ರದೇಶದಲ್ಲಿ 5 ಮಂದಿ ಆರೋಪಿಗಳು ಒಂದು ಸ್ಕೂಟರ್‌ ಕಂಡು ಬಂದಿದೆ. ಪೊಲೀಸರನ್ನು ಕಂಡ ಆರೋಪಿಗಳು ಓಡಲು ಯತ್ನಿಸಿದ್ದು, ಸಿಬಂದಿ ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ಆರೋಪಿಗಳು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಪಾಲುಮಾಡಿ, ಸ್ಥಳದಿಂದ ಹೋಗಲು ವಾಹನಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಗಾಂಜಾ ಪೂರೈಕೆ ಮಾಡಿದ ಧ್ರುವನ್‌ ಶೆಟ್ಟಿ ಮತ್ತು ಡಾ| ಪ್ರಜ್ವಲ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.