ಉಡುಪಿ : ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ 30 ವರ್ಷಗಳ ಹಿಂದೆ 200 ರೂಪಾಯಿ ಪಡೆದು ಮೋಸ ಮಾಡಿದ್ದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೈಂದೂರಿನ ಮಯ್ಯಾಡಿಯ ಬಿ.ಕೆ. ರಾಮಚಂದ್ರ ರಾವ್ ಬಂಧಿತ ಆರೋಪಿ.
ಸಿರ್ಸಿಯ ಬಿಳಿಗಿರಿ ಕೊಪ್ಪದ ವೆಂಕಟೇಶ ಅವರಿಗೆ ಪದವಿ ಓದುತ್ತಿರುವಾಗ ರಾಮಚಂದ್ರನ ಪರಿಚಯವಾಗಿತ್ತು. ಆತ ಸರಕಾರಿ ನೌಕರಿ ಕೊಡಿಸುವುದಾಗಿ 200 ರೂಪಾಯಿ ಪಡೆದು ಕೆಲಸ ಕೊಡಿಸದೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು.
ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಡಿವೈಎಸ್ಪಿ ಗೀತಾ ಪಾಟೀಲ್ ಮತ್ತು ಸಿರ್ಸಿ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಎಂ., ಪಿಎಸ್‌ಐ ಸಂತೋಷ ಕುಮಾರ್ ಎಂ., ಅಶೋಕ್ ರಾಠೋಡ್ ಮಾರ್ಗದರ್ಶನದಂತೆ ಠಾಣೆಯ ರಾಘವೇಂದ್ರ ಜಿ. ಮತ್ತು ಮಾರುತಿ ಗೌಡ ಬೆಂಗಳೂರಿನ ಬಳೆಪೇಟೆಯಲ್ಲಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.