Home Crime ಕೇರಳ‌ : ನಾಯಿಗಳ ಅಕ್ರಮ ಸಾಕಾಣಿಕೆ ಮತ್ತು ಮಾರಾಟದ ಆರೋಪ : 8 ವರ್ಷದ ಪುತ್ರ...

ಕೇರಳ‌ : ನಾಯಿಗಳ ಅಕ್ರಮ ಸಾಕಾಣಿಕೆ ಮತ್ತು ಮಾರಾಟದ ಆರೋಪ : 8 ವರ್ಷದ ಪುತ್ರ ಹಾಗೂ 26 ಶ್ವಾನಗಳನ್ನು ತೊರೆದು ವ್ಯಕ್ತಿ ನಾಪತ್ತೆ…!!

ಎರ್ನಾಕುಲಂ : ವ್ಯಕ್ತಿಯೊಬ್ಬ ತನ್ನ ಬಾಡಿಗೆ ಮನೆಯಲ್ಲಿ ತನ್ನ ಎಂಟು ವರ್ಷದ ಪುತ್ರ ಹಾಗೂ 26 ನಾಯಿಗಳನ್ನು ತೊರೆದು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.
ಇದರೊಂದಿಗೆ, ಕೇರಳದ ಎರ್ನಾಕುಲಂ ಜಿಲ್ಲೆಯ ತ್ರಿಪುನಿತುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶ್ವಾನಗಳ ರಕ್ಷಣಾ ಕಾರ್ಯಾಚರಣೆಗೂ ಚಾಲನೆ ನೀಡಲಾಗಿದೆ.

ನಾಪತ್ತೆಯಾಗಿರುವ ವ್ಯಕ್ತಿಯನ್ನು ಸುಧೀಶ್ ಎಸ್. ಕುಮಾರ್ ಎಂದು ಗುರುತಿಸಲಾಗಿದ್ದು, ಆತ ರವಿವಾರದಿಂದ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಾನೆ. ಈ ವೇಳೆ ಆತ ತನ್ನ ಎಂಟು ವರ್ಷದ ಪುತ್ರ ಹಾಗೂ ಶ್ವಾನಗಳಿಗೆ ಯಾವುದೇ ಆಹಾರ ಅಥವಾ ಆರೈಕೆಯ ವ್ಯವಸ್ಥೆ ಮಾಡದೆ ಕಣ್ಮರೆಯಾಗಿದ್ದಾನೆ. ತನ್ನ ತಂದೆ ತನ್ನನ್ನು ಏಕಾಂಗಿಯಾಗಿ ತೊರೆದಿದ್ದರಿಂದ ಗಾಬರಿಗೊಳಗಾದ ಪುತ್ರನು, ತಂದೆಯು ಮನೆಗೆ ವಾಪಸ್ಸಾಗದಿರುವ ವಿಷಯವನ್ನು ವಿದೇಶದಲ್ಲಿರುವ ತನ್ನ ತಾಯಿಗೆ ತಿಳಿಸಿದ ನಂತರ, ಈ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಬಾಲಕನ ತಾಯಿಯು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಪೊಲೀಸರು ನಾಪತ್ತೆಯಾಗಿರುವ ವ್ಯಕ್ತಿಗಾಗಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಬಾಲಕನನ್ನು ಸುರಕ್ಷಿತವಾಗಿ ಆತನ ಅಜ್ಜಿ-ತಾತನ ಮನೆಗೆ ಸ್ಥಳಾಂತರಿಸಲಾಗಿದ್ದು, ಹಸಿವಿನಿಂದ ಬಳಲುತ್ತಿದ್ದ ಶ್ವಾನಗಳನ್ನು ಪ್ರಾಣಿಗಳ ಮೇಲಿನ ಕ್ರೌರ್ಯ ನಿಯಂತ್ರಣ ಸಂಘಟನೆಯು ರಕ್ಷಿಸಿದೆ.

ಕಳೆದ ಕೆಲವು ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ತನ್ನ ಪುತ್ರನೊಂದಿಗೆ ವಾಸಿಸುತ್ತಿದ್ದ ಸುದೀಶ್, ಪದೇ ಪದೇ ಉತ್ತಮ ತಳಿಯ ಶ್ವಾನಗಳನ್ನು ಮನೆಗೆ ತರುತ್ತಿದ್ದ ಎನ್ನಲಾಗಿದೆ. ಸುದೀಶ್ ಶ್ವಾನಗಳನ್ನು ಮನೆಗೆ ಕರೆತರುತ್ತಿದ್ದಾನೆ ಹಾಗೂ ಅಕ್ರಮ ಶ್ವಾನ ಸಂತಾನೋತ್ಪತ್ತಿ ಕೇಂದ್ರವನ್ನು ನಡೆಸುತ್ತಿದ್ದಾನೆ ಎಂದು ನೆರೆಹೊರೆಯವರು ಮಹಾನಗರ ಪಾಲಿಕೆಗೆ ದೂರು ನೀಡಿದ್ದರು ಎಂದು ಹೇಳಲಾಗಿದೆ.

ಈ ಸಂಬಂಧ ಆಗಸ್ಟ್ 7ರಂದು ಸುದೀಶ್ ಗೆ ನೋಟಿಸ್ ಜಾರಿಗೊಳಿಸಿದ್ದ ಮಹಾನಗರ ಪಾಲಿಕೆ, ಶ್ವಾನಗಳನ್ನು ಅಕ್ರಮವಾಗಿ ಇಟ್ಟುಕೊಳ್ಳುವುದು ಹಾಗೂ ಮಾರಾಟ ಮಾಡುವುದು ಮಾಡಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಹಾಗೂ ಶ್ವಾನಗಳನ್ನು ತಕ್ಷಣವೇ ಸ್ಥಳಾಂತರಗೊಳಿಸಬೇಕು ಎಂದು ಎಚ್ಚರಿಸಿತ್ತು. ಶ್ವಾನಗಳನ್ನು ಮರಳಿಸುವ ಗಡುವು ಸಮೀಪಿಸಿದ್ದರಿಂದ, ಸುದೀಶ್ ತನ್ನ ಮನೆಯಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಸುದೀಶ್ ಬಿಟ್ಟು ಪರಾರಿಯಾಗಿದ್ದ ಶ್ವಾ ನಗಳ ಪೈಕಿ ಮೂರು ಶ್ವಾನಗಳು ಮರಿ ಹಾಕುವ ಸ್ಥಿತಿಯಲ್ಲಿದ್ದು, ಅವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.

ಶ್ವಾನಗಳನ್ನು ತೊರೆದು ಹೋಗಿರುವುದಕ್ಕಾಗಿ ಸುದೀಶ್ ವಿರುದ್ಧ ದೂರು ದಾಖಲಿಸಲು ಯೋಜಿಸಲಾಗುತ್ತಿದೆ ಎಂದು ಪ್ರಾಣಿಗಳ ಮೇಲಿನ ಕ್ರೌರ್ಯ ನಿಯಂತ್ರಣ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತಿಳಿಸಿದ್ದಾರೆ ಎಂದು On Manorama ಸುದ್ದಿ ಸಂಸ್ಥೆ ವರದಿ ಮಾಡಿದೆ.ಈ ಸಂಬಂಧ ಪೊಲೀಸರು ಇದುವರೆಗೆ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ನಾಪತ್ತೆಯಾಗಿರುವ ವ್ಯಕ್ತಿಯನ್ನು ಹಾಜರುಪಡಿಸುವಂತೆ ಆತನ ಸಹೋದರನಿಗೆ ಪೊಲೀಸರು ಸೂಚಿಸಿದ್ದಾರೆ.