ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ಗಂಡ ಹೆಂಡತಿ ನಡುವಿನ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡಿದೆ.
ಕ್ಷುಲ್ಲಕ ಕಾರಣಕ್ಕೆ ನಡೆದ ಕಲಹದಲ್ಲಿ ಪತಿ ತನ್ನ ಪತ್ನಿಯನ್ನೇ ಕೊಲೆ ಮಡಿದ್ದು, ನಂತರ ತಾನೂ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಮಾ.20 (ಇಂದು) ಬೆಳಿಗ್ಗ ಗೋಳ್ತಿಲ ಸಮೀಪ ನಡೆದಿದೆ.
ಕುಮಾರಮಂಗಲ ಮೂಲದ ಸಾವಿತ್ರಿ (42) ಕೊಲೆಯಾದ ಮಹಿಳೆ. ಆಕೆಯ ಪತಿ ಎಮೆಟ್ಟಿ ನಿವಾಸಿ ಪುರುಷೋತ್ತಮ ಅಲಿಯಾಸ್ ಬೈರಪ್ಪ ಎಂಬಾತನೇ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಇಂದು ಬೆಳಿಗ್ಗೆ ದಂಪತಿಗಳ ನಡುವೆ ಜೋರಾಗಿ ಜಗಳ ನಡೆದಿದ್ದು, ಪುರೋಷತ್ತಮ ಸಿಟ್ಟುಗೊಂಡು ಪತ್ನಿ ಸಾವಿತ್ರಿಯನ್ನು ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಹತ್ಯೆಗೈದ ನಂತರ ಆರೋಪಿ ಪುರುಷೋತ್ತನ ಅದೇ ಕತ್ತಿಯಿಂದ ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಆತ್ಮಹತ್ಯೆ ಯತ್ನ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಕೂಡಲೇ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಹತ್ಯೆಗೆ ನಿಖರ ಕಾರಣವೇನು ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.





