ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಪೊಲೀಸ್ ತಪಾಸಣೆ ವೇಳೆ 1 ಕೀಪ್ಯಾಡ್ ಮೊಬೈಲ್ ಮತ್ತು 2 ಟಚ್ ಸ್ಕ್ರೀನ್ ಮೊಬೈಲ್ ಫೋನ್ ಹಾಗೂ ಎರಡು ಬಂಡಲ್ ಬೀಡಿಗಳು ಪತ್ತೆಯಾಗಿವೆ.
ಇತೀಚೆಗೆ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಗಲಾಟೆಯಾಗಿತ್ತು. ಉಳ್ಳಾಲದ ರೌಡಿ ಮುಖ್ತಾರ್ ಮತ್ತು ಇತರ ಕೈದಿಗಳ ನಡುವೆ ಗಲಾಟೆ ನಡೆದಿತ್ತು. ಮುಖ್ತಾರ್ ಮರದ ರೀಪಿನಿಂದ ಕೇಶವ ಎಂಬಾತನ ತಲೆಗೆ ಹೊಡೆದಿದ್ದ. ಗಂಭೀರ ಗಾಯಗೊಂಡಿದ್ದ ಕೇಶವನನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರು ಜೈಲಿನ ಸುರಕ್ಷೆಯ ದೃಷ್ಟಿಯಿಂದ ಶೋಧ ಕೈಗೊಂಡಿದ್ದರು. ತಪಾಸಣೆ ವೇಳೆ ಮೊಬೈಲ್ ಮತ್ತು ಬೀಡಿ ಪತ್ತೆಯಾಗಿದೆ. ಮಹಜರು ಮೂಲಕ ನಿಷೇಧಿತ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೈಲಿನಲ್ಲಿ ಈಗಾಗಲೇ ಜಾಮರ್ ಅಳವಡಿಸಲಾಗಿದ್ದು, ನೆಟ್‌ವರ್ಕ್ ಲಭಿಸುವುದಿಲ್ಲ. ಆಗುವುದಿಲ್ಲ. ಜತೆಗೆ ಲೋಹ ಶೋಧಕ ಯಂತ್ರವವನ್ನೂ ಅಳವಡಿಸಲಾಗಿದ್ದು, ಇದರ ನಡುವೆಯೂ ಮೊಬೈಲ್ ಜೈಲಿನೊಳಗೆ ಹೋಗಿದ್ದು ಹೇಗೆ ಎನ್ನುವ ಪ್ರಶ್ನೆಗಳು ಮೂಡಿವೆ. ಜೈಲಿನ ಸಿಬಂದಿಯೂ ಇದರಲ್ಲಿ ಭಾಗಿಯಾಗಿರುವ ಸಂಶಯವಿದ್ದು, ಈ ಬಗ್ಗೆ ತೀವ್ರ ತನಿಖೆಯಾಗಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.