Home Crime ಮಗನ ಸಾವಿನ ಬೇಸರದಿಂದ ವ್ಯಕ್ತಿ ಆತ್ಮಹತ್ಯೆ…!!

ಮಗನ ಸಾವಿನ ಬೇಸರದಿಂದ ವ್ಯಕ್ತಿ ಆತ್ಮಹತ್ಯೆ…!!

ಕಾರ್ಕಳ, ಜೂ.12: ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ಹೊಸಮನೆ ದರ್ಖಾಸು ನಿವಾಸಿ ವಿಶ್ವನಾಥ್ (55) ಅವರು ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತ ವಿಶ್ವನಾಥ್ ಅವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಜೂನ್ 10ರಂದು ಮದ್ಯಪಾನ ಮಾಡಿ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಜೂನ್ 11ರಂದು ಬೆಳಿಗ್ಗೆ ಅವರ ಪತ್ನಿ ಸರೋಜಿನಿ ಕೆಲಸಕ್ಕೆ ತೆರಳುವ ವೇಳೆ ವಿಶ್ವನಾಥ್ ಅವರು ಎಲೆ-ಅಡಿಕೆ ತಿನ್ನಲು ಅಡಿಕೆ ಕತ್ತರಿಸುತ್ತಿದ್ದರು ಎನ್ನಲಾಗಿದೆ.

ಬಳಿಕ ಬೆಳಿಗ್ಗೆ ಸುಮಾರು 11.30 ಗಂಟೆಗೆ ಸರೋಜಿನಿ ಮನೆಗೆ ವಾಪಸ್ಸಾದಾಗ ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಅನುಮಾನಗೊಂಡ ಅವರು ಕಿಟಕಿಯಿಂದ ಒಳಗೆ ನೋಡಿದಾಗ, ಮನೆಯ ಕೋಣೆಯ ಮಾಡಿನ ಪಕಾಸಿಗೆ ನೈಲಾನ್ ಹಗ್ಗ ಕಟ್ಟಿ ವಿಶ್ವನಾಥ್ ಅವರು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮಗನ ನಿಧನದ ಬೇಸರ ಹಾಗೂ ಮದ್ಯಪಾನದ ಚಟದಿಂದ ಉಂಟಾದ ಮಾನಸಿಕ ಖಿನ್ನತೆಯ ಹಿನ್ನೆಲೆಯಲ್ಲಿ ಅವರು ಈ ಕೃತ್ಯಕ್ಕೆ ಮುಂದಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 28/2026ರಡಿ ಬಿಎನ್‌ಎಸ್‌ಎಸ್ ಕಲಂ 194 ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.